ಎಸ್.ಎಲ್.ಟಿ. ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ | ಮಕ್ಕಳ ಪ್ರತಿಭೆಗೆ ಮೆಚ್ಚುಗೆ
ಗುರುಮಠಕಲ್ : ವಿಜ್ಞಾನ ಎಂದರೆ ಕೇವಲ ಪುಸ್ತಕದ ಓದು ಅಲ್ಲ. ಪ್ರಶ್ನೆ ಕೇಳುವುದು, ಪ್ರಯೋಗ ಮಾಡುವುದು, ಹೊಸದನ್ನು ಕಂಡು ಹಿಡಿಯುವುದೇ ವಿಜ್ಞಾನ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಇಂತಹ ವಸ್ತು ಪ್ರದರ್ಶನಗಳಿಂದ ಮಕ್ಕಳ ಪ್ರತಿಭೆ ಹೊರಬರುತ್ತದೆ ಎಂದು ಖಾಸಾಮಠದ ಪೂಜ್ಯಾ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಎಸ್.ಎಲ್.ಟಿ. ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲ್, ಟಿವಿಗೆ ಅಂಟಿಕೊಳ್ಳದೆ, ಪುಸ್ತಕ ಓದು, ಪ್ರಯೋಗ, ಚಿಂತನೆ ಕಡೆ ಗಮನ ಕೊಡಬೇಕು. ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು, ವೈದ್ಯರು, ಶಿಕ್ಷಕರು, ಸಮಾಜದ ಮುಂದಾಳುಗಳು. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸಂಸ್ಕಾರ, ಶಿಸ್ತು, ಗುರು-ಹಿರಿಯರಲ್ಲಿ ಗೌರವ ಬೆಳೆಸಿಕೊಳ್ಳಬೇಕು ಎಂದರು.
ವಿಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು. ವಿಜ್ಞಾನ ಮನುಷ್ಯನಿಗೆ ಸೌಲಭ್ಯ ಕೊಡುತ್ತದೆ, ಆದರೆ ಸಂಸ್ಕಾರ ಮನುಷ್ಯನಿಗೆ ಮಾನವೀಯತೆ ಕೊಡುತ್ತದೆ. ಎರಡೂ ಇದ್ದಾಗ ಮಾತ್ರ ಮಗು ಉತ್ತಮ ಪ್ರಜೆಯಾಗುತ್ತದೆ. ಪಾಲಕರು ಮಕ್ಕಳ ಮೇಲೆ ಕಾಳಜಿ ವಹಿಸಿ, ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.
ಲಕ್ಷ್ಮೀ ತಿಮ್ಮಪ್ಪ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ನರೇಂದ್ರ ರಾಠೋಡ್ ಮಾತನಾಡಿ, ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕು. ಅದಕ್ಕಾಗಿ ಉತ್ತಮ ಶಿಕ್ಷಣ, ಸಂಸ್ಕಾರ, ಶಿಸ್ತು ಅಗತ್ಯ. ಮಕ್ಕಳು ಓದಿನ ಜೊತೆಗೆ ವಿಜ್ಞಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಟ್ರಸ್ಟ್ ವತಿಯಿಂದ ಮಕ್ಕಳ ಶಿಕ್ಷಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ವಿಜ್ಞಾನ ಮಾದರಿಗಳನ್ನು ಸ್ವಾಮೀಜಿ ಹಾಗೂ ಗಣ್ಯರು ವೀಕ್ಷಿಸಿ, ಮಕ್ಕಳನ್ನು ಪ್ರಶಂಸಿಸಿದರು.
ಈ ಸಂಧರ್ಭದಲ್ಲಿ ಶಿಕ್ಷಣ ಸಂಯೋಜಕ ರವೀಂದ್ರ ಚೌಹಾಣ್, ಸಿ.ಆರ್.ಪಿ. ಬಾಲಪ್ಪ ಸಿರಿಗಂ, ಅಯ್ಯಪ್ಪ ದಾಸ ರಾಠೋಡ್, ರಾಜು ರಾಠೋಡ್, ಪ್ರಚಾರ್ಯ ಲೀನಾಜೋಸಿ, ಮಹಮ್ಮದ್ ಹಫೀಸ್, ನರೇಂದ್ರ ಸಾಕಾ, ರಾಧಿಕಾ, ಹೊಲಿಕಾ, ಸುವರ್ಣ, ಲಕ್ಷಿö್ಮ ಹಾಗೂ ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಶಿಕ್ಷಕರು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
