ಯಾದಗಿರಿ: ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರ, ಹಿಂದುಳಿದ ಪ್ರದೇಶವಾಗಿದ್ದು ವಿಶೇಷವಾಗಿ ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ ಗಂಭೀರ ಸಮಸ್ಯೆಯಾಗಿದೆ. ಸಮಸ್ಯೆ ಪರಿಹಾರ ಕಂಡುಕೊಳ್ಳುವ ಕುರಿತು ಅಗತ್ಯ ಕ್ರಮ ವಹಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅಶೋಕ ಎಸ್ ಗುರುಮಠಕಲ್ ಅವರು ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಗುರುಮಠಕಲ್ ಸರ್ಕಾರಿ ಅತಿಥಿ ಗೃಹದಲ್ಲಿ ಮನವಿ ಸಲ್ಲಿಸಿದ ಅವರು, ರಾಜ್ಯದ ವಿವಿಧ ನಗರಗಳಲ್ಲಿ ಐಟಿ/ಬಿಟಿ ಕ್ಷೇತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಗುರುಮಠಕಲ್ ಮತಕ್ಷೇತ್ರದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಇದರಿಂದಾಗಿ ನಮ್ಮ ಪ್ರದೇಶದ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಗುರುಮಠಕಲ್ ಪಟ್ಟಣದಲ್ಲಿ ಐಟಿ ಪಾರ್ಕ್ ಅಥವಾ ಮಿನಿ ಐಟಿ ಹಬ್ ಸ್ಥಾಪನೆ ಮಾಡುವುದು, ಸ್ಥಳೀಯ ಯುವಕರಿಗೆ ಐಟಿ ಹಾಗೂ ಡಿಜಿಟಲ್ ಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸುವುದು, ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ಮೂಲಸೌಕರ್ಯ (ಇಂಟರ್ನೆಟ್ ಸಂಪರ್ಕ, ಇ-ಸೇವೆ ಕೇಂದ್ರಗಳು) ವನ್ನು ಅಭಿವೃದ್ಧಿಪಡಿಸುವುದು ಅಲ್ಲದೇ ಸ್ಥಳೀಯ ಸ್ಟಾರ್ಟ್ ಆಪ್ ಗಳಿಗೆ ಉತ್ತೇಜನ ಹಾಗೂ ಆರ್ಥಿಕ ಸಹಾಯ ಒದಗಿಸುವುದು.
ಉದ್ಯೋಗಮೇಳ ಹಾಗೂ ಸ್ಕಿಲ್ ಡೆವಲಪ್ಟಂಟ್ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಬೇಕು ಇದರಿಂದ ಪ್ರದೇಶದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಮಾಣಿಕ್ ಮುಕಡಿ, ಲಿಂಗಪ್ಪ ತಾಂಡುರ್ಕರ್, ಭೀಮಶಪ್ಪ ಶನಿವಾರಂ, ಕಿಷ್ಟಪ್ಪ ಸೈದಪ್ಪೋಳ, ಹುಸೇನಪ್ಪ ಪುಲಿ, ಅಯಾಜ್ ಅಲಿ ಇತರರು ಇದ್ದರು.
