ಗುರುಮಠಕಲ್: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ತಯಾರಿ ಜೋರಾಗಿರುವ ಮಧ್ಯೆಯೇ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಗಿಫ್ಟ್ ಕೊಟ್ಟಿದ್ದಾರೆ. ಪಟ್ಟಣದ ವಿಜಯಪುರ–ಹೈದರಾಬಾದ್ ರಾಜ್ಯ ಹೆದ್ದಾರಿಯು ಇದೀಗ ಅತ್ಯಾಧುನಿಕ ಎಲ್‌ಇಡಿ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ವಿಶೇಷ ಕಾಳಜಿಯಿಂದ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ 90ಕ್ಕೂ ಹೆಚ್ಚು ಅತ್ಯಾಧುನಿಕ ಎಲ್‌ಇಡಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದ್ದು, ಹೆದ್ದಾರಿಯು ಬೆಳಕಿನಿಂದ ಝಗಮಗಿಸುತ್ತಿದೆ.
ಪಟ್ಟಣದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ರಾತ್ರಿ ಸಂಚಾರಕ್ಕೆ ಅನುಕೂಲ ಕಲ್ಪಿಸಿರುವ ಈ ಕಾಮಗಾರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚುರುಕುಗೊಂಡ ಅಭಿವೃದ್ಧಿ ಕಾರ್ಯಗಳು: ಒಂದೇ ಸೂರಿನಡಿ ವಿವಿಧ ಇಲಾಖೆಗಳ ಕಚೇರಿಗಳು ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸುವ ಸರ್ಕಾರದ ಪ್ರಮುಖ ಮಿನಿ ವಿಧಾನಸೌಧ ಕಾಮಗಾರಿ ಗುರುಮಠಕಲ್ ನಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಅಂದಾಜಿನ ಪ್ರಕಾರ 3 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದಾದರೇ ಜನರು ಯಾದಗಿರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ.
ಅಗ್ನಿ ಶಾಮಕ ಠಾಣೆ ನಿರ್ಮಾಣ: ತುರ್ತು ಸಂದರ್ಭದಲ್ಲಿ ಆಸ್ತಿಪಾಸ್ತಿ, ಪ್ರಾಣ ರಕ್ಷಣೆ ಮಾಡಬೇಕಿರುವ ಅಗ್ನಿ ಶಾಮಕ ಠಾಣೆ ಈಗಾಗಲೇ ನಿರ್ಮಾಣ ಹಂತದಲ್ಲಿರುವುದು ಖುಷಿಯ ವಿಚಾರ. 100 ಬೆಡ್ ಆಸ್ಪತ್ರೆ ಕಟ್ಟಡ ಪ್ರಗತಿ : ಇನ್ನು ಪ್ರಮುಖವಾಗಿ ಬೇಕಿರುವ ಆರೋಗ್ಯ ಸೇವೆ ದೊರೆಯುವ ಸಾರ್ವಜನಿಕ ಆಸ್ಪತ್ರೆ 100 ಬೆಡ್ ಸಾಮರ್ಥ್ಯದ ಕಟ್ಟಡ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
