ಯಾದಗಿರಿಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ “ದೀಪ ಸಂಜೀವಿನಿ” ವಿಶೇಷ ಮಾಸಿಕ ಸಂತೆ ಮೇಳ ಆಯೋಜನೆ
ಯಾದಗಿರಿ: ದೀಪಾವಳಿ ಹಬ್ಬದ ಅಂಗವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (NRLM) ವತಿಯಿಂದ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಹಾಗೂ ಮಹಿಳಾ ಉದ್ಯಮಶೀಲತೆ ಮತ್ತು ಜೀವನೋಪಾಯ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಯಾದಗಿರಿ ಜಿಲ್ಲಾ ಪಂಚಾಯತ್ ಆವರಣದಲ್ಲಿ “ದೀಪ ಸಂಜೀವಿನಿ” ವಿಶೇಷ ಮಾಸಿಕ ಸಂತೆಯನ್ನು ಆಯೋಜಿಸಲಾಯಿತು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಸವರಾಜ ಶರಬೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶರಣಬಸಪ್ಪ, ಆಹಾರ ಇಲಾಖೆಯ ನಿರ್ದೇಶಕ ಸೋಮಶೇಖರ್, CEO PA ಮಂಜುನಾಥ್, ನಬಾರ್ಡ್ DDM ಯಮುನಾ ಪೈ ಮತ್ತು DGM ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯೋಜನಾ ನಿರ್ದೇಶಕರು ವಿವಿಧ ಸ್ವಸಹಾಯ ಗುಂಪುಗಳ ಮಳಿಗೆಗಳಿಗೆ ಭೇಟಿ ನೀಡಿ, ಮಹಿಳೆಯರು ತಯಾರಿಸಿದ ಪದಾರ್ಥಗಳಾದ ಬೇಸನ್ ಲಾಡು, ಶೇಂಗಾ ಲಾಡು,ಚಕ್ಲಿ, ಕೋಡ್ಬಳೆ, ಕಜ್ಜಾಯ,ಕರ್ಚಿಕಾಯಿ ಅವಲಕ್ಕಿ ಚುಡಾ, ಖಾರ ಹಾಗೂ ಇನ್ನಿತರ ವಿವಿಧ ಬಗೆಯ ಉತ್ಪನ್ನಗಳನ್ನು ಹಾಗೂ ದೀಪಾವಳಿ ಹಬ್ಬಕೆ ಬೇಕಾಗುವ ವಿವಿಧ ಬಗೆಯ ಅಗರಬತ್ತಿ, ದೀಪದ ಬತ್ತಿ, ಮಹಿಳೆಯರ ಬಳೆಗಳು, ಬಂಜಾರ ಸಮಾಜದ ವಿವಿಧ ಉಡುಪುಗಳು ಗಮನಸೆಳೆದವು.
ವಿಶೇಷವಾಗಿ ಕಿಲ್ಲನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಮಣ್ಣಿನ ದೀಪಗಳು, ಬಣ್ಣದ ಮಣ್ಣಿನ ದೀಪ ಗಳು ಮುಖ್ಯ ಆಕರ್ಷಣೆಯಾಗಿದ್ದವು. ಮುದ್ನಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಗುಂಪಿನ ಮಹಿಳೆಯರು ಸಂತೆಗೆ ಆಗಮಿಸಿದ ಮಹಿಳೆಯರಿಗೆ ಸ್ಥಳದಲ್ಲಿ ಮೆಹಂದಿ ಹಾಕುವ ಮೂಲಕ ತಮ್ಮ ಕೌಶಲ್ಯ ಹಾಗೂ ಸೇವೆಯನ್ನು ಪ್ರದರ್ಶಿಸಿದರು. ಇದು ಮಹಿಳೆಯರಲ್ಲಿರುವ ವಿವಿಧ ಕೌಶಲ್ಯಗಳನ್ನು ಉದ್ಯೋಗ ಮತ್ತು ಆದಾಯದ ಮೂಲಗಳನ್ನಾಗಿ ಪರಿವರ್ತಿಸುವ ಉತ್ತಮ ಪ್ರಯತ್ನವಾಗಿ ಗಮನ ಸೆಳೆಯಿತು.
ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಲು ಇಂತಹ ಮಾರುಕಟ್ಟೆ ಮತ್ತು ಉದ್ಯಮಶೀಲತಾ ಚಟುವಟಿಕೆಗಳು ಹೆಚ್ಚಿನ ಸಹಕಾರಿಯಾಗಲಿವೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಮಹಿಳೆಯರನ್ನು ಪ್ರೋತ್ಸಾಹಿಸಿದರು. ಸುಮಾರು 10 ಸ್ವ ಸಹಾಯ ಗುಂಪುಗಳು ಭಾಗವಹಿಸಿದ್ದವು.
ಈ ವಿಶೇಷ ಸಂತೆ, ಸ್ವಸಹಾಯ ಗುಂಪಿನ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಉತ್ತಮ ವೇದಿಕೆಯನ್ನು ಒದಗಿಸಿತು. ಇದರಿಂದ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಮಹಿಳಾ ಉದ್ಯಮಶೀಲತೆ, ಸ್ವಾವಲಂಬನೆ ಮತ್ತು ಸುಸ್ಥಿರ ಜೀವನೋಪಾಯಕ್ಕೆ ಉತ್ತೇಜನ ದೊರೆಯಿತು.
ಜಿಲ್ಲಾ NRLM ವ್ಯವಸ್ಥಾಪಕ ಸಿದ್ರಾಮಪ್ಪ, ಗಿರೀಶ್ ಮುಂಡರಗಿ ಮಠ, ಕಾವೇರಿ, ಪ್ರವೀಣ್, ರಮೇಶ್, ಉಮೇಶ್,ಡಿಕೆ, ಬಸವರಾಜ ಮತ್ತು ಸುರೇಖಾ, ಶರಣು, ತಸ್ಲೀಮ್, ಮಹಾನಂದ, ಭುವನೇಶ್ವರಿ, ಕೃಷಿ ಸಖಿಯರು ಹಾಗೂ ಪಶು ಸಖಿಯರು ಭಾಗವಹಿಸಿದ್ದರು.
