ಅಂತರ್ ಮಹಾವಿದ್ಯಾಲಯಗಳ ಪುಟ್ಬಾಲ್ ಪುರುಷರ ಪಂದ್ಯಾವಳಿ | ತಂಡಗಳ ಆಯ್ಕೆ
ಶಹಾಪೂರ: ಫುಟ್ಬಾಲ್ ಆಟವು ವೇಗ, ತಂತ್ರಗಾರಿಕೆ, ದೈಹಿಕ ಸಾಮರ್ಥ್ಯ ಹಾಗೂ ತಂಡದ ಸಹಕಾರದ ಅದ್ಭುತ ಸಂಗಮವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.
ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕ್ರೀಡಾಂಗಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪೂರ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು ಸಂಯುಕ್ತ ಆಶ್ರಯದಲ್ಲಿ ಅಂತರ್ ಮಹಾವಿದ್ಯಾಲಯಗಳ ಪುಟ್ಬಾಲ್ ಪುರುಷರ ಪಂದ್ಯಾವಳಿಗಳು ಹಾಗೂ ವಿಶ್ವವಿದ್ಯಾಲಯ ತಂಡಗಳ ಆಯ್ಕೆ ಪ್ರಕ್ರಿಯೆ ಉದ್ಘಾಟಿಸಿ, ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.
ಕ್ರೀಡೆ ಎನ್ನುವುದು ಕೇವಲ ಮನೋರಂಜನೆಯ ಸಾಧನವಲ್ಲ; ಅದು ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವವನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಕಾರ್ಯಕ್ರಮವನ್ನು ಶಹಾಪುರ ಪ್ರಥಮ ದರ್ಜೆ ಕಾಲೇಜು ಇದೇ ಸೆಮಿಸ್ಚರ್ ನಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕೃಷಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ. ಪ್ರಸನ್ನ ಕುಮಾರ ಸಾಗರೆ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ ಹಾಗಾಗಿ ಕ್ರೀಡಾ ಆಯೋಜನೆಗಳಿಗೆ ತಮ್ಮ ಕಾಲೇಜಿನ ಕ್ರೀಡಾಂಗಣವನ್ನು ಕ್ರೀಡಾ ಸಂಪನ್ಮೂಲಗಳನ್ನು ಬಳಸಲು ತಾವು ಸಂಪೂರ್ಣ ಸಹಕರಿಸುವುದಾಗಿ ತಿಳಿಸಿದರು.
ಸಿಬ್ಬಂಸಿ ಕಾರ್ಯದರ್ಶಿ ಡಾ. ಅಶೋಕರಡ್ಡಿ ಮಾತನಾಡುತ್ತ ಈ ಕ್ರೀಡೆಗೆ ಬಹುದೊಡ್ಡ ಪರಂಪರೆ ಇದೆ, ಕೆಲವೇ ವರ್ಷಗಳಲ್ಲಿ ಭಾರತ ಪುಟ್ಬಾಲ್ ಕ್ರೀಡೆಯಲ್ಲಿ ಜಗತ್ತನ್ನಾಳಲಿದೆ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ನಾಗರೆಡ್ಡಿ ಎಂ. ಬೈರೆಡ್ಡಿ ಪ್ರಾಸ್ತಾವಿಕ ನುಡಿಗಳಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವಕರಲ್ಲಿ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ, ಶಿಸ್ತು, ತಂಡದ ಮನೋಭಾವ ಬೆಳೆಸುತ್ತದೆ ಎಂದರು.
ಅಧ್ಯಕತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿದ್ದಪ್ಪ ಬಿ.ದಿಗ್ಗಿ ವಹಿಸಿದ್ದರು. ವಿಶ್ವವಿದ್ಯಾಲಯ ಪುರುಷರ ಪುಟ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿ ಒಳಪಡುವ ಅನೇಕ ಮಹಾವಿದ್ಯಾಲಯಗಳ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಧ್ಯಾಪಕ ಡಾ. ಸುನೀಲ ಕುಮಾರ ಬೀದೆ , ಡಾ. ಅಶೋಕರೆಡ್ಡಿ ಪಾಟೀಲ್, ಡಾ. ಸಾವಿತ್ರಿ ಕೃಷ್ಣ, ಡಾ. ಮಲ್ಲಿಕಾರ್ಜುನ, ಮಂಜುನಾಥ ಡಾ. ಗುರುರಾಜ ನಾಗ್ಲೀಕರ್, ಡಾ. ಸಿದ್ದಲಿಂಗ ರಾಠೋಡ, ಡಾ. ಮಲ್ಲಿಕಾರ್ಜುನ್ ಬಾಳಿ, ಡಾ. ಮಾರುತಿಕುಮಾರ ಬುರಾನುದ್ದಿನ್, ಡಾ. ದೇವಪ್ಪ ಬಿರಾದಾರ್ ಡಾ. ಶರಣಪ್ಪ ಸಂಘರ್ಷ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ.ಶಂಕ್ರಮ್ಮ ಪಾಟೀಲ್ ಕಾರ್ಯಕ್ರಮ ನಿರೂಪಿಸಿ, ಡಾ. ಬಾಬುರಾಯ ದೊರೆ ಸ್ವಾಗತಿಸಿ, ಡಾ. ಮಾನಪ್ಪ ಅಗ್ನಿ ಅವರು ವಂದಿಸಿದರು.
