ಯಾದಗಿರಿಯ ಎಪಿಎಫ್ ನಲ್ಲಿ ಕಾರ್ಯಾಗಾರ | ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ ಉಪನಿರ್ದೇಶಕರು
ಯಾದಗಿರಿ: ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ನಾವೇನು ಕಮ್ಮಿಯಿಲ್ಲ. ಮಕ್ಕಳಲ್ಲಿನ ನಾವು ಕಲಿಕೆಯಲ್ಲಿ ಹಿಂದಿದ್ದೇವೆ ಎನ್ನುವ ಸಂಕುಚಿತ ಭಾವನೆ ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಹೇಳಿದರು.
ಯಾದಗಿರಿಯ ಎಪಿಎಫ್ ಸಂಸ್ಥೆಯಲ್ಲಿ ನ.2ರಿಂದ 4ರ ವರೆಗೆ ನಡೆಯಲಿರುವ ಎಐ ಅತಿಥಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಎಐ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ಆಧುನಿಕ ಯುಗದಲ್ಲಿ ಸ್ಪರ್ಧೆಗೆ ಸಿದ್ಧ ಮಾಡಬೇಕಿದೆ. ಪ್ರಸ್ತುತಕ್ಕೆ ಹೊಂದಿಕೊಂಡು ಕಾರ್ಯ ಮಾಡಬೇಕಿದೆ. ಬದಲಾಗುತ್ತಿರುವ ಜಗತ್ತಿನ ಜೊತೆ ಸಾಗಬೇಕಿದೆ. ಈ ನಿಟ್ಟಿನಲ್ಲಿ ಗುರುತರ ಜವಾಬ್ದಾರಿ ಎಐ ಶಿಕ್ಷಕರ ಮೇಲಿದೆ. ಎಐ ಟೀಚರ್ಸ್ ಎ -ಓನ್ ಶಿಕ್ಷಕರಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಶಾಲೆಯಿಂದ ದೂರ ಉಳಿಯಬಾರದು, ಬಾಲ್ಯ ವಿವಾಹ ತಡೆ ಇತರೆ ಒಳ್ಳೆಯ ಉದ್ದೇಶಕ್ಕೆ ವಿದ್ಯಾರ್ಥಿಗಳಲ್ಲಿ ಕನಸು ಬಿತ್ತಬೇಕು. ಅವರು ಜೀವನದಲ್ಲಿ ಗುರಿ ಸಾಧಿಸಲು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲೆಯ 4 ಜನ ಯುಪಿಎಸ್ಸಿ ಸಾಧಕರನ್ನು ಕರೆಯಿಸಿ, ಪ್ರೌಢ ಶಾಲೆ ಮಕ್ಕಳಿಗೆ ಮೋಟಿವೇಷನ್ ತರಗತಿ ಮಾಡುವ ಯೋಜನೆಯಿದೆ. ಮಕ್ಕಳ ಕನಸು ನನಸಾಗಿಸಲು ವಿನೂತನವಾಗಿ ಕಾರ್ಯಕ್ರಮ ರೂಪಿಸುವ ಚಿಂತನೆಯಿದೆ ಎಂದರು. ಈ ವೇಳೆ ಎಪಿಎಫ್ ನ ಸಚಿನ್, ನೋಡಲ್ ಅಧಿಕಾರಿ ಅಂಬ್ರಣ್ಣ, ಡಯಟ್ ಉಪನ್ಯಾಸಕ ಶರಣಗೌಡ ಪಾಟೀಲ್ ಇದ್ದರು.
