ವಿಶ್ವ ಸ್ಟ್ರೋಕ್ ದಿನಾಚರಣೆ | ಸಾರ್ವಜನಿಕರಿಗೆ ಜಾಗೃತಿ
ಯಾದಗಿರಿ: ಪಾರ್ಶ್ವವಾಯು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಪದ್ಮಾನಂದ ಗಾಯಕ್ವಾಡ್ ತಿಳಿಸಿದರು.
ಗುರುವಾರ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ) ಹಾಗೂ ಯಿಮ್ಸ್ ಆಸ್ಪತ್ರೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾರ್ವಜನಿಕರಲ್ಲಿ ಸ್ಟ್ರೋಕ್ ಕುರಿತು ಜಾಗೃತಿ ಮೂಡಿಸುವ ಮೂಲಕ ಸಕಾಲದಲ್ಲೇ ಚಿಕಿತ್ಸೆ ಪಡೆಯಲು ಪ್ರೇರೇಪಿಸಲು ಕರೆ ನೀಡಿದರು.
ಕಚೇರಿ ಮೆಡಿಕಲ್ ಆಫೀಸರ್ ಡಾ. ವರ್ಧಮಾನ ಮಾತನಾಡಿ, ಮುಖ ಒಂದು ಕಡೆ ವಾಲುವುದು, ಕೈ ಅಥವಾ ಕಾಲಿನಲ್ಲಿ ಬಲ ಕಡಿಮೆಯಾಗುವುದು. ಮಾತನಾಡಲು ತೊಂದರೆಯಾಗುವುದು ಹಾಗೂ ಹಠಾತ್ ತಲೆಸುತ್ತು ಉಂಟಾಗುವುದು ಪಾರ್ಶ್ವವಾಯುವಿನ ಪ್ರಮುಖ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಿಳಿಸಿದರು.
ಮೆಡಿಸಿನ್ ಎಚ್.ಓ.ಡಿ ಡಾ. ವಿಜಯಲಕ್ಷ್ಮಿ ಮಾತನಾಡಿ, ರಕ್ತದೊತ್ತಡ, ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಮತೋಲಿತ ಆಹಾರ ಸೇವಿಸುವುದರಿಂದ ಸ್ಟ್ರೋಕ್‌ನ ಅಪಾಯವನ್ನು ಕಡಿಮೆ ಮಾಡಬಹುದೆಂದರು.
ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಆರ್ಥೋಪೆಡಿಕ್ ಡಾ. ಮಂಜುನಾಥ್ ತಿಳಿಸಿ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಫಿಸಿಯೋಥೆರಪಿಸ್ಟ್ ಮೋಹನ ರೆಡ್ಡಿ ಅವರು ಮಾತನಾಡಿ, ಪಾರ್ಶ್ವವಾಯುವಿನ ಲಕ್ಷಣಗಳನ್ನು ಸಾರ್ವಜನಿಕರು ತಿಳಿದುಕೊಳ್ಳುವುದು ಮತ್ತು ರೋಗಲಕ್ಷಣಗಳು ಕಂಡುಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದರು. ಪಾರ್ಶ್ವವಾಯುವಿನ ಲಕ್ಷಣಗಳು, ತಡೆಗಟ್ಟುವ ಕ್ರಮಗಳು, ಆರಂಭಿಕ ಗುರುತಿಸುವಿಕೆ ಹಾಗೂ ತುರ್ತು ಚಿಕಿತ್ಸೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ. ಶ್ವೇತಾ ಎ.ಬಿ.ಆರ್.ಕೆ ಜಿಲ್ಲಾ ಸಂಯೋಜಕರು, ನಾಗರತ್ನ ಜಿಲ್ಲಾ ಸಂಯೋಜಕರು, ಶ್ರೀಲಕ್ಷ್ಮಿ ಸೈಕಾಲೋಜಿಸ್ಟ್, ಸಿದ್ದಾರೂಢ ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿ ವರ್ಗ, ರೋಗಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
