ಗುರುಮಠಕಲ್ ನಲ್ಲಿ ಮಾಜಿ ಸಚಿವ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ನೇತೃತ್ವದಲ್ಲಿ ಶರಣಪ್ಪ ಮಟ್ಟೂರ ಪರ ಪ್ರಚಾರ | ಬದಲಾವಣೆಗಾಗಿ ಮಟ್ಟೂರ ಅವರಿಗೆ ಮತ ನೀಡಲು ಮನವಿ

ಗುರುಮಠಕಲ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಕಾಶದ ಎತ್ತರಕ್ಕೆ ಬೆಳೆಸಿದ ಕ್ಷೇತ್ರ ಗುರುಮಠಕಲ್. ಹಾಗಾಗಿ ಅವರ ಕ್ಷೇತ್ರದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ  ಬೆಂಬಲಿಸಬೇಕು ಎಂದು ಮಾಜಿ ಸಚಿವ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ಗುರುಮಠಕಲ್ ಖಾಸಗಿ ಸ್ಥಳದಲ್ಲಿ ಶರಣಪ್ಪ ಮಟ್ಟೂರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಖರ್ಗೆ ಪ್ರಧಾನ ಮಂತ್ರಿ ಸಮಾನ ಹುದ್ದೆಯಲ್ಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಖರ್ಗೆ ಪ್ರಧಾನಿ ಎಂದು ಭವಿಷ್ಯ ನುಡಿದರು. ಶಿಕ್ಷಕ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕೆಂದು ಮನವಿ ಮಾಡಿದರು. ನಮ್ಮ ಸರ್ಕಾರವಿದೆ. ಬೇಕಾದ ಕೆಲಸ ಮಾಡಿಸಿಕೊಳ್ಳಬಹುದು ಎಂದರು.

ಕೆಪಿಸಿಸಿ ಸದಸ್ಯ ರಾಜಗೋಪಾಲ್ ರಡ್ಡಿ ಮಾತನಾಡಿ, ದೇಶದಲ್ಲಿ ಯಾವ ರೀತಿ ಸರ್ಕಾರ ನಡೆದುಕೊಳ್ಳುತ್ತಿದೆ ಎಲ್ಲರಿಗೂ ಗೊತ್ತಿರುವ ಸಂಗತಿ. ಕಾಂಗ್ರೆಸ್ ಕೆಲಸ ಮಾಡುತ್ತಿದೆ ಹೆಚ್ಚು ಮಾತನಾಡಲ್ಲ ಎಂದರು. ಅತ್ಯಂತ ಸರಳ ವ್ಯಕ್ತಿ, ಸಮಸ್ಯೆಗೆ ಸ್ಪಂದಿಸುವ ಮಟ್ಟೂರ ಅವರಿಗೆ ಮತ‌ನೀಡಲು ಮನವಿ ಮಾಡಿದರು.

ಇದಕ್ಕೂ ಮೊದಲು ಶರಣಪ್ಪ ಮಾನೆಗಾರ ಮಾತನಾಡಿ, ಮಟ್ಟೂರ ಅವರಿಗೆ ಈ ಹಿಂದೆ ವಿಧಾನ ಪರಿಷತ್ ಗೆ ಕಳಿಸಿದ್ದೀರಿ, 37 ಬೇಡಿಕೆ ಈಡೇರಿಕೆಗೆ ಶ್ರಮಿಸಿದ್ದಾರೆ. ಇನ್ನು 39 ಬೇಡಿಕೆ ಈಡೇರಿಕೆಗೆ ವಾಗ್ದಾನ ಮಾಡಿರುವುದಾಗಿ ಹೇಳಿದರು. ಶಿಕ್ಷಕರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕೆಂದು ಹೇಳಿದರು.

ಉಪನ್ಯಾಸಕರ ಸಂಘದ ಪ್ರಮುಖರಾದ ತಿಮ್ಮಯ್ಯ ಪುರ್ಲೆ ಮಾತನಾಡಿ, 24 ವರ್ಷ ನಮೋಶಿ ಗೆ ಕೊಟ್ಟಾಗಿದೆ. ಬರೀ ಮಾತಾಡೊದಲ್ಲ, ಏನಾದರೂ ಕೊಡುಗೆ ಇರಬೇಕಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ, ಹಾಗಾಗಿ ಎಲ್ಲರೂ ಬೆಂಬಲಿಸಲು ಮನವಿ ಮಾಡಿದರು. ಯಾರು ಏನೆ ಇರಲಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಶಿಕ್ಷಕರ ವಿಭಾಗದ ಕೆಪಿಸಿಸಿ ಉಪಾಧ್ಯಕ್ಷ ಆಶಪ್ಪ ಮಾತನಾಡಿದರು. ರವೀಂದ್ರ ರೆಡ್ಡಿ ಪಾಟೀಲ್, ಅಖ್ತರ್ ಪ್ಯಾರೆ, ಆನಂದ ಯಲ್ಲಾಪುರ, ಸಂಜೀವ ಚಂದಾಪೂರ, ಸಾಯಬಣ್ಣ ಯದ್ಲಾಪೂರ, ನರಸಿಂಹರೆಡ್ಡಿ, ಸೈಯದ್ ಬಾಬಾ, ಅಶೋಕ್ ಎಸ್ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!