ವ್ಯಾಜ್ಯ ಪರಿಹಾರಕ್ಕೆ ಹೈಕೋರ್ಟ್ ನಿರ್ದೇಶನ |ಗುರುಮಠಕಲ್ ನಲ್ಲಿ ಕಟ್ಟಡ ಪರಿಶೀಲನೆ
ಗುರುಮಠಕಲ್: ಗಡಿ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿರುವ ನ್ಯಾಯಾಲಯ ಸ್ಥಾಪನೆಗೆ ಇದೀಗ ವೇಗ ದೊರೆತಿದ್ದು, ಪಟ್ಟಣದ ಗಣೇಶ ನಗರದಲ್ಲಿರುವ ಟೌನ್ಹಾಲ್ ಕಟ್ಟಡವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ. ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಗುರುಮಠಕಲ್ ತಾಲ್ಲೂಕಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಸ್ಥಳೀಯವಾಗಿಯೇ ನಡೆಯುವಂತೆ ನ್ಯಾಯಾಲಯದ ಕಲಾಪ ಆರಂಭಿಸಲು ಅಗತ್ಯವಿರುವ ಕಟ್ಟಡ ಮತ್ತು ಸ್ಥಳಾವಕಾಶದ ಕುರಿತು ಅವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ನ್ಯಾಯಾಲಯದ ಕಾರ್ಯಾರಂಭಕ್ಕೆ ಬೇಕಾದ ಸೌಲಭ್ಯಗಳು ಹಾಗೂ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.
ಗುರುಮಠಕಲ್ ತಾಲ್ಲೂಕಿನ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಯಾದಗಿರಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಧೀಶರು ವಾರದಲ್ಲಿ ಮೂರು ದಿನ ಗುರುಮಠಕಲ್ಗೆ ಭೇಟಿ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಹಾಗಾಗಿ ಪ್ರತಿ ಗುರುವಾರ, ಶುಕ್ರವಾರ ಮತ್ತು ಶನಿವಾರ ಗುರುಮಠಕಲ್ನಲ್ಲಿ ನ್ಯಾಯಾಲಯದ ಕಲಾಪ ನಡೆಸಿ, ತಾಲ್ಲೂಕಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಮೂರು ದಿನ ಸ್ಥಳೀಯವಾಗಿಯೇ ನ್ಯಾಯಾಲಯದ ಕಲಾಪ ನಡೆಯುವುದರಿಂದ ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆಯಲಿದೆ ಎನ್ನುವುದು ಜನರ ನಂಬಿಕೆಯಾಗಿದೆ.
ಪರಿಶೀಲನೆ ವೇಳೆ ತಹಶಿಲ್ದಾರರ ಚನ್ನಮಲ್ಲಪ್ಪ ಘಂಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪಿಡಬ್ಲೂಡಿ ಎಇಇ ಪರಶುರಾಮ, ಯಾದಗಿರಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್ ಪಾಟೀಲ್, ಕಾರ್ಯದರ್ಶಿ ಗೋವಿಂದ ಜಾಧವ್, ವಕೀಲರಾದ ರಾಜಾ ರಮೇಶಗೌಡ್, ಮೋಹನ್ ಗಜರೆ, ಕೃಷ್ಣಾ ಮೇದಾ, ದೇವಿಂದ್ರಪ್ಪ.ಎಂ, ಸಾಬಣ್ಣ ಇಮಲಾಪುರ, ರಘುನಾಥರೆಡ್ಡಿ ಅನಪೂರ, ರಾಘವೇಂದ್ರ ಜೋಶಿ, ಸಂತೋಷ್ ಮಹೇಂದ್ರಕಾರ್, ಆನಂದರಾವ್ ನೀರಟ್ಟಿ, ಕೃಷ್ಣಾ ವಿಶ್ವನಾಥರೆಡ್ಡಿ ಚಂಡರಕಿ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಹಲವರು ಇದ್ದರು.
