ಎಲ್ಲೆಡೆ 79ನೇ ಸ್ವಾತಂತ್ರ್ಯ ಉತ್ಸವ | ತ್ರಿವರ್ಣ ಮಯವಾದ ಗಿರಿ ಜಿಲ್ಲೆ | ಜನರಲ್ಲಿ ಮೊಳಗಿದ ದೇಶ ಪ್ರೇಮ | ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರರಿಂದ ಧ್ವಜಾರೋಹಣ | ಆರ್ಥಿಕತೆಯಲ್ಲಿ ದೇಶ ಟಾಪ್ 5 ಸ್ಥಾನಕ್ಕೇರಿಕೆ ಹೆಮ್ಮೆ | ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯ
ಯಾದಗಿರಿ/ಗುರುಮಠಕಲ್: ಸಮಸ್ತ ಜನರಿಗೆ 79ನೇ ಸ್ವಾತಂತ್ರ್ಯ ಉತ್ಸವದ ಶುಭಾಶಯ ಕೋರಿ ಮಾತು ಆರಂಭಿಸಿದ ಶಾಸಕ ಶರಣಗೌಡ ಕಂದಕೂರ, ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಲವು ಜನ ಪ್ರಾಣ ಕಳೆದುಕೊಂಡರು, ಆಪರೇಷನ್ ಸಿಂಧೂರ ಮೂಲಕ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತಕ್ಕ ಉತ್ತರ ನೀಡಿದೆ. ಇದು ನಮ್ಮ ದೇಶದ ತಾಕತ್ತು ಎಂದರು.
ಗುರುಮಠಕಲ್ ಸಾರ್ವಜನಿಕ ಧ್ವಜಾರೋಹಣ ಸಮಿತಿಯಿಂದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷೆವಹಿಸಿ ಅವರು ಮಾತನಾಡಿದರು.
ಅಮೇರಿಕಾ, ಚೀನಾದಂತ ದೇಶಗಳ ಸಾಲಿನಲ್ಲಿ ಭಾರತ ಎತ್ತರಕ್ಕೆ ಏರುತ್ತಿದೆ. ದೇಶ ವಿರೋಧಿಗಳ ಹೋರಾಡುವ ಪರಿಸ್ಥಿತಿ ಒಂದೆಡೆಯಾದರೆ, ದೇಶದೊಳಗಿನ ಭ್ರಷ್ಟಾಚಾರಿ, ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಆರ್ಥಿಕವಾಗಿ ಟಾಪ್ 5 ಸ್ಥಾನದಲ್ಲಿ ಭಾರತ ಇರುವುದು ಹೆಮ್ಮೆಯ ಸಂಗತಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು, ಅವರ ಧ್ಯೇಯವನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಜ್ಞಾನೋದಯ ಪಾಠ ಶಾಲೆ ಮುಖ್ಯಗುರು ಚಂದ್ರಶೇಖರ ಪಾಟೀಲ್ ಉಪನ್ಯಾಸ ನೀಡಿ, 200 ವರ್ಷ ಬ್ರಿಟಿಷ್ ಗುಲಾಮಗಿರಿಯಿಂದ ಬಳಲಿದ ಬಳಿಕ ಸ್ವಾತಂತ್ರ್ಯ ಹೋರಾಟ, ಬಲಿದಾನದ ಮೂಲಕ ಪಡೆದಿದ್ದೇವೆ. ಮಾರ್ಚ್ 13, 1919ರಲ್ಲಿ ಪಂಚಾಬ್ ಜಲಿಯನ್ ವಾಲಾಬಾಗ್ ಘಟನೆ ವಿವರಿಸಿ, ಎಡ್ವರ್ ಮೈಕೆಲ್ ಆದೇಶದಂತೆ ಡಯರ್ ಜನರ ಮೇಲೆ ಗುಂಡು ಹಾರಿಸಿದ ಸನ್ನಿವೇಶ ವಿವರಿಸಿದರು.
ಕ್ರಾಂತಿಕಾರಿ ಉದಮ್ ಸಿಂಗ್ ಅವರ ಕುರಿತ ದೇಶಾಭಿಮಾನ ವಿವರಿಸಿದರು. ಇಂಗ್ಲೆಂಡ್ ಗೆ ತೆರಳಿ ಸಭೆಯಲ್ಲಿ ಮೈಕೆಲ್ ನ ಮೇಲೆ 5 ಗುಂಡು ಹಾರಿಸಿದ ಎಂದು ತಿಳಿಸಿದರು. ನ್ಯಾಯಾಲಯದಲ್ಲಿ ವಿಚಾರಣೆ ವೇಳೆ, ತಮಗೆ ಆತನನ್ನು ಸಾಯಿಸಿದ ಪಾಶ್ಚಾತಾಪ ಇಲ್ಲ. 20 ವರ್ಷ ಕಾದು ಪ್ರತಿಜ್ಞೆ ಈಡೇರಿಸಿದೆ ಎಂದಿದ್ದ ಉದಮ್ ಸಿಂಗ್ ಎಂದು ಹೇಳಿದರು.
ಈ ವೇಳೆ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಉಪಾಧ್ಯಕ್ಷೆ ರೇಣುಕಾ ಪಡಿಗೆ, ಪಿಐ ವೀರಣ್ಣ ದೊಡ್ಡಮನಿ, ತಾ.ಪಂ. ಅಧಿಕಾರಿ ಅಂಬ್ರೇಶ ಪಾಟೀಲ್, ಮುಖ್ಯಾಧಿಕಾರಿ ಭಾರತಿ ದಂಡೋತಿ, ಗ್ರೇಡ್ 2 ತಹಸೀಲ್ದಾರ್ ನರಸಿಂಹ ಸ್ವಾಮಿ, ಸಿಡಿಪಿಓ ಶರಣಬಸವ ಸೇರಿದಂತೆ ಪುರಸಭೆ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು ಇದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಚರಣ ನರ್ವಿ, ಅಜಯ್ ಶ್ರೀಗಿರಿ, ಅನೀಲ ಕುಮಾರ, ಮುಸ್ಕಾನ ಬೇಗಂ ಅವರನ್ನು ಸನ್ಮಾನಿಸಲಾಯಿತು. ರವೀಂದ್ರ ಚವ್ಹಾಣ ಶಿಕ್ಷಣ ಸಂಯೋಜಕ ಸ್ವಾಗತಿಸಿದರು. ನಾರಾಯಣರೆಡ್ಡಿ ಪೊಲೀಸ್ ಪಾಟೀಲ್ ನಿರೂಪಿಸಿದರು.
ಯಾದಗಿರಿ ಕರವೇ ಜಿಲ್ಲಾ ಕಾರ್ಯಾಲಯಲ : ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಅಧ್ಯಕ್ಷತೆಯಲ್ಲಿ 79ನೇ ಭಾರತ ಸ್ವಾತಂತ್ರೊತ್ಸವ ದಿನಾಚರಣೆಯನ್ನು ರಾಷ್ಟಪಿತ ಮಹಾತ್ಮ ಗಾಂಧಿಜೀ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟ್ರೀಯ ಧ್ವಜಾರೋಹಣ ನೇರವೆರಿಸಲಾಯಿತು.
ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ 228ನೇ ಜಯಂತ್ಯೋತ್ಸವದ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಕರವೇ ಮುಖಂಡರು ಭಾಗಿಯಾಗಿದ್ದರು.
