ಗುರುಮಠಕಲ್ ನಲ್ಲಿ ವಾಲಿಬಾಲ್ ಪಂದ್ಯಾವಳಿ | 17 ವಯೋಮಿತಿ ಒಳಗಿನ ಬಾಲಕರ ವಿಜಯನಗರ ತಂಡ ಪ್ರಥಮ, ಕೊಪ್ಪಳ ದ್ವಿತೀಯ | ಬಾಲಕೀಯರ ಕೊಪ್ಪಳ ಪ್ರಥಮ, ವಿಜಯನಗರ ದ್ವಿತೀಯ | 14 ವರ್ಷ ಒಳಗಿನ ಬಾಲಕರ ಯಾದಗಿರಿ ಪ್ರಥಮ, ಬಳ್ಳಾರಿ ದ್ವಿತೀಯ | ಬಾಲಕೀಯರ ಯಾದಗಿರಿ ಪ್ರಥಮ, ವಿಜಯನಗರ ದ್ವಿತೀಯ ಸ್ಥಾನ | ಮಕ್ಕಳ ಸಾಧನೆ ಡಿಡಿಪಿಐ ಶ್ಲಾಘನೆ
ಯಾದಗಿರಿ/ಗುರುಮಠಕಲ್ : ವಿದ್ಯಾರ್ಥಿ ಜೀವನದಲ್ಲಿ ದೈಹಿಕ ಶಿಕ್ಷಣ ಮಕ್ಕಳಲ್ಲಿ ಶಿಸ್ತು, ಸಂಯಮ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 2026-27ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಿತಿ ಯೊಳಗಿನ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕರ ಸ್ಥಾನ ಎಷ್ಟು ಮಹತ್ವದ್ದೋ, ಅಷ್ಟೇ ದೈಹಿಕ ಶಿಕ್ಷಕರ ಸ್ಥಾನವೂ ಮಹತ್ವದ್ದಾಗಿದೆ. ಶಾಲೆಯಲ್ಲಿ ಉತ್ತಮ ಶಿಕ್ಷಣದ ಕಲಿಕಾ ವಾತಾವರಣ ನಿರ್ಮಿಸುವುದು ಮುಖ್ಯ ಶಿಕ್ಷಕರಾದರೆ, ವಿದ್ಯಾರ್ಥಿಗಳಲ್ಲಿ ಬಾಹ್ಯ ಚಿಂತನೆ, ಕ್ರೀಡಾ ಮನೋಭಾವ ಹಾಗೂ ವ್ಯಕ್ತಿತ್ವವನ್ನು ರೂಪಿಸುವಲ್ಲಿ ದೈಹಿಕ ಶಿಕ್ಷಕರು ಪ್ರಮುಖ ಎಂದವರು, ಕ್ರೀಡಾ ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.
ವಿಭಾಗ ಮಟ್ಟದಲ್ಲಿ ಪ್ರತಿಭಾವಂತ ಹಾಗೂ ಬಲಿಷ್ಠ ತಂಡವನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಈ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುರುಷೋತ್ತಮ ಜೋಶಿ ಇತರರು ಮಾತನಾಡಿದರು. ಹಣಮಮತಪ್ಪ ಹಂದರಿಕಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ನೀರಟಿ, ಸಿಇಓ ರವಿಂದ್ರ ಚೌವ್ಹಾಣ್, ತಾಯಪ್ಪ ಬಂಗ್ಲಿ, ಬುಡ್ಡಪ್ಪ ಜನಾರ್ದನ, ಅನೀಲ ಕುಮಾರ್, ಅಶೋಕ ಕುಮಾರ, ರಾಘವೇಂದ್ರ ಅಳ್ಳಳ್ಳಿ, ಶಿವಕುಮಾರ ರೆಡ್ಡಿ, ಹಣಮನಾಯಕ್, ವೆಂಕಟರಾಮುಲು, ಗೋವಿಂದಪ್ಪ, ಶಿವರಾಜ ಸಾಕ, ಲಕ್ಷ್ಮೀಕಾಂತರಡ್ಡಿ, ಶರಣಪ್ಪ, ಸಿಅರ್ ಪಿ ಬಾಲಪ್ಪ, ಚೆನ್ನಾರೆಡ್ಡಿ, ನರಸಪ್ಪ, ಮಹೇಶ ಗೌಡ ಇತರರು ಇದ್ದರು.
