ಕಾರ್ಮಿಕರು, ಬಡ ಜನರೇ ಚಟಕ್ಕೆ ದಾಸರಾಗಿ ಕಾಯಿಲೆಗಳಿಗೆ ತುತ್ತು | ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮಕ್ಕೆ ಒತ್ತಾಯ
ಯಾದಗಿರಿ: ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್‌ನಲ್ಲಿ ಕಳ್ಳ ಭಟ್ಟಿ ಸರಾಯಿ ತಯಾರಿಕೆಗೆ ಬಳಸುವ ಕಳಪೆ ಮಟ್ಟದ ಬೆಲ್ಲವನ್ನು ಮಾರಾಟ ಮಾಡುವ ಮಾಫಿಯಾ ತಲೆ ಎತ್ತಿದ್ದು, ಗುರುಮಠಕಲ್ ಸುತ್ತಲಿನ ಗ್ರಾಮಗಳಿಗೆ ಸರಬರಾಜು ಮಾಡುತ್ತಿದ್ದು, ಇದರಿಂದ ತಯಾರಿಸಿದ ಸಾರಾಯಿ ಕುಡಿದು ಕಾರ್ಮಿಕರ ಆರೋಗ್ಯ ಹಾಳಾಗುತ್ತಿದ್ದು, ಸಂಸಾರಗಳು ಬೀದಿಗೆ ಬರುವಂತಾಗಿದೆ. ಹಾಗಾಗಿ ಇದನ್ನು ನಿಯಂತ್ರಣಕ್ಕೆ ತರಲು ಸರ್ ಎಂ. ವಿಶ್ವೇಶ್ವರ ಯ್ಯ ಕಟ್ಟಡ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರದೀಪ ಅಣಬಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇದರಿಂದ ಕಾರ್ಮಿಕರ ಕಿಡ್ನಿ, ಲಿವರ್‌ನಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಲ್ಲದೇ ಪೌಡರ್ ಸಾರಾಯಿ ಕೂಡ ಎಗ್ಗಿಲ್ಲದೇ ಮಾರಾಟ ಮಾಡುತ್ತಿದ್ದಾರೆ. ಪೊಲೀಸರ, ಕಾನೂನು ಭಯ ಇಲ್ಲದೇ ರಾಜಾರೋಷವಾಗಿ ಅಕ್ರಮ ಬೆಲ್ಲವನ್ನು ಸಂಗ್ರಹಿಸಿ ಮಾರಾಟ ಮಾಡುತ್ತ ಅಮಾಯಕ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಬೆಲ್ಲ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಯಾದಗಿರಿ ಮತ್ತು ಗುರಮಿಠಕಲ್‌ನಲ್ಲಿ ಒಟ್ಟು ನೊಂದಾಯಿತ 61500 ಕ್ಕೂ ಕಾರ್ಮಿಕರಿದ್ದು, ಕಾರ್ಮಿಕ ಕೆಲಸದಲ್ಲಿ ದಣಿವಾ ದಾಗ ಇಂಥಹ ಸರಾಯಿ ಕುಡಿದು ಕಾರ್ಮಿಕರು ಕಿಡ್ನಿ, ಲಿವರ್ ಸೇರಿದಂತೆ ಅನೇಕ ಖಾಯಿಲೆಗಳು ಬರುತ್ತಿವೆ.
ಗುರುಮಠಕಲ್‌ದಿಂದಲೇ ಬೆಲ್ಲ ಸರಬರಾಜುಗೊಳ್ಳುತ್ತಿದ್ದರೂ ತಮಗೇನು ಸಂಬಂಧವಿಲ್ಲ ಎನ್ನುವಂತೆ ಅಧಿಕಾರಿಗಳು ಮೌನವಹಿಸಿದ್ದು, ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಕ್ರಮ ಬೆಲ್ಲ ಸಾಗಾಣಿಕೆ ತಡೆದು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಒಂದು ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೂ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
