ಗುರುಮಠಕಲ್, ಯಾದಗಿರಿಯನ್ನು ಬರಗಾಲ ಪಟ್ಟಿಯಿಂದ ಕೈ ಬಿಟ್ಟು ಸರ್ಕಾರ | ಶಾಸಕ ಕಂದಕೂರಗೆ ಛಲವಾದಿ ನಾರಾಯಣ ಸ್ವಾಮಿ ಇತರರ ಸಾಥ್ |ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಯಾದಗಿರಿ ಬಂದ್ ಯಶಸ್ವಿ | ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಬೆಂಗಳೂರು/ಯಾದಗಿರಿ : ಯಾದಗಿರಿ ಜಿಲ್ಲೆಯ ಕೇವಲ ಶಹಾಪೂರ ತಾಲೂಕು ಒಂದನ್ನೇ ಸರ್ಕಾರ ಬರ ಪೀಡಿತ ಎಂದು ಘೋಷಿಸಿದ್ದು, ಎರಡನೇ ಪಟ್ಟಿಯಲ್ಲಿಯೂ ಹೆಸರು ಬಿಟ್ಟು ಹೋಗಿದ್ದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತಿದ್ದಾರೆ.
ಮೊದಲನೇ ಪಟ್ಟಿಯಲ್ಲಿ ಜಿಲ್ಲೆಯ ಶಹಾಪುರ ಒಂದೇ ಬಾರಿ ಪಟ್ಟಿಯಲ್ಲಿತ್ತು, ಆದರೇ ಎರಡನೇ ಪಟ್ಟಿಯಲ್ಲಿ ಇತರೆ ತಾಲೂಕಿನ ರೈತರಿಗೆ ನ್ಯಾಯ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿ, ಜನರ ತಾಳ್ಮೆ ಕಟ್ಟೆ ಒಡೆದಿದೆ.
ಮೊದಲ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿದ್ದ ಕಲಬುರಗಿ ಜಿಲ್ಲೆಯ ತಾಲೂಕುಗಳು ಸೇರಿದೆ. ಆದರೇ ಯಾದಗಿರಿ ಜಿಲ್ಲೆಯ ಗುರುಮಠಕಲ್, ಯಾದಗಿರಿ, ವಡಗೇರಾ, ಹುಣಸಗಿ ಹಾಗೂ ಸುರಪುರ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಸರ್ಕಾರದ ಧೋರಣೆಯನ್ನು ಖಂಡಿಸಿ ಸೆ.7ಕ್ಕೆ ಯಾದಗಿರಿ ಜಿಲ್ಲೆ ಬಂದ್ ಕರೆ ನೀಡಲಾಗಿತ್ತು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ಯಶಸ್ವಿಯಾಗಿದೆ.
ಗುರುಮಠಕಲ್ ಮತಕ್ಷೇತ್ರದ ಶಾಸಕರು ವಿಧಾನಸೌಧದ ಬಳಿ ಅನ್ಯಾಯವನ್ನು ಖಂಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೇ ವಿಪರ್ಯಾಸ ಎಂಬಂತೆ, ಗುರುಮಠಕಲ್ ಮತಕ್ಷೇತ್ರದಲ್ಲಿ ಮಾತ್ರ ಯಾವುದೇ ಬಂದ್ ಆಗಿಲ್ಲ.
ಶಾಸಕರು ಏನು ಮಾಡುತ್ತಿದ್ದಾರೆ?: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಕಾಂಗ್ರೆಸ್ ನಿಂದಲೇ ಗೆದ್ದು ಹೋಗಿದ್ದಾರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ತಮ್ಮ ಕ್ಷೇತ್ರದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದಾರಾ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹೋರಾಟಗಾರರ ಆಕ್ರೋಶ: ಸರ್ಕಾರ ಬರ ಘೋಷಣೆಯಲ್ಲಿ ಮಲತಾಯಿ ಧೋರಣೆ ತೋರುತ್ತಿದೆ. ಒಂದು ತಾಲೂಕು ಮಾತ್ರ ಘೋಷಣೆ ಮಾಡಿ ಉಳಿದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮರೆಪ್ಪ ಚಿಟ್ಟರಕರ್, ಉಮೇಶ್ ಮುದ್ನಾಳ, ಮಲ್ಲಿಕಾರ್ಜುನ ಜಲ್ಲಪ್ಪನೋರ್ ಸೇರಿ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಭಾಗಿ : ಯಾದಗಿರಿ ಜಿಲ್ಲೆಯ 5 ತಾಲೂಕು ಬರ ಘೋಷಣೆಯಲ್ಲಿ ಮಲತಾಯಿ ಧೋರಣೆ ತೋರಿದನ್ನು ಖಂಡಿಸಿ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ರೈತ ಸಂಘದ ಪ್ರಮುಖರು, ಹೋರಾಟಗಾರರು, ರೈತರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
