ಮಳೆಗಾಲ ಆರಂಭ ಹಿನ್ನೆಲೆ ಹೆಚ್ಚಿನ ಅನಾಹುತಕ್ಕೂ ಮೊದಲು ಎಚ್ಚೆತ್ತುಕೊಳ್ಳಲಿ ಜೆಸ್ಕಾಂ | ವಿದ್ಯುತ್ ಪರಿವರ್ತಕಗಳಿಗೆ ರಕ್ಷಣಾ ತಂತಿ ಅಳವಡಿಕೆಗೆ ಯಾವಾಗ ?

ಯಾದಗಿರಿ: ವಿದ್ಯುತ್ ಪರಿವರ್ತಕದ ಸುತ್ತಲೂ ಅಧಿಕಾರಿಗಳು ಸುರಕ್ಷತಾ ಬೇಲಿಯನ್ನು ಹಾಕದೇ ನಿರ್ಲಕ್ಷ್ಯ ವಹಿಸಿದರ ಪರಿಣಾಮ ಅಮಾಯಕ ಹಸುವೊಂದು ಪ್ರಾಣ ಬಲಿಯಾದ ಘಟನೆ ತಾಲೂಕಿನ ಬದ್ದೇಪಲ್ಲಿಯಲ್ಲಿ ಸಂಭವಿಸಿದೆ.

ಗ್ರಾಮದ ಕೃಷ್ಣಯ್ಯ ಎಂಬುವವರಿಗೆ ಸೇರಿದ ಹಸು ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಸೂಕ್ತ ರಕ್ಷಣಾ ತಂತಿ ಅಳವಡಿಸದಿರುವುದೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ವಿದ್ಯುತ್ ಅವಘಡ ಯಾವುದೇ ಕ್ಷಣದಲ್ಲಿ ಪ್ರಾಣ ಹಾನಿ ಮಾಡಬಹುದು ಎನ್ನುವುದು ತಿಳಿದೂ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಜೆಸ್ಕಾಂ ಅಧಿಕಾರಿಗಳು ಯಾವುದನ್ನು ಲೆಕ್ಕಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು ಎಂಟರಿಂದ ಹತ್ತು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳಿದ್ದು ಅವುಗಳ ಸುತ್ತಲ್ಲೂ ರಕ್ಷಣಾ ಬೇಲಿಯನ್ನು ಹಾಕದ ಪರಿಣಾಮ ಜನ ಜಾನುವಾರುಗಳಿಗಲ್ಲಿ ಆತಂಕ ಹುಟ್ಟಿಸಿದೆ. ಈ ಬಗ್ಗೆ  ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಅಳಲು ತೋಡಿಕೊಂಡಿದ್ದಾರೆ.

ಕೆಲವಡೆ ವಿದ್ಯುತ್ ಕಂಬಗಳು ಭಾಗಿದ್ದು, ತಂತಿಗಳು ಜೋತು ಬಿದ್ದಿವೆ. ಇದರಿಂದಾಗಿ ಸಣ್ಣ ಪುಟ್ಟ ಗಾಳಿ ಬೀಸಿದರೂ ಕರೆಂಟ್ ಕಟ್ ಆಗಿ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಕೆಲವಡೆಯಂತೂ ಗಿಡದ ಮರೆಯಲ್ಲಿರುವ ವಿದ್ಯುತ್ ತಂತಿಗಳು ಯಾವಾಗ ಹರಿದು ಬೀಳುತ್ತವೆಯೋ ಗೊತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿ ಕಾಣದ ವಿದ್ಯುತ್ ಘಟಕ…!: ಬದ್ದೇಪಲ್ಲಿ ಗ್ರಾಮದ ವಿದ್ಯುತ್ ಘಟಕದಲ್ಲಿ ಸಿಬ್ಬಂದಿ ಇಲ್ಲದ ಕಾರಣ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಇಡೀ ಘಟಕದಲ್ಲಿ ಗುತ್ತಿಗೆ ಆಧಾರಿತ ಆಪರೇಟರ್ ಗಳನ್ನು ಹೊರತುಪಡಿಸಿ ಇತರ ಸಿಬ್ಬಂದಿಗಳ ಹುದ್ದೆ ಖಾಲಿ ಇವೆ. ಸೈದಾಪುರ ಉಪ ಘಟಕಕ್ಕೆ ಸೇರಿದ ಲೈನ್ ಮ್ಯಾನ್ ಒಬ್ಬರಿಗೆ ಬದ್ದೇಪಲ್ಲಿ ಘಟಕದ ನಿರ್ವಹಣಾ ಜವಾಬ್ದಾರಿಯನ್ನು ವಹಿಸಲಾಗಿದ್ದು, ಅವರೊಬ್ಬರೇ ಬದ್ದೇಪಲ್ಲಿ, ಬದ್ದೇಪಲ್ಲಿ ತಾಂಡಾ, ಬಾಲಚೇಡ, ಸೌರಾಷ್ಟ್ರಹಳ್ಳಿ ಮುಂತಾದ ಗ್ರಾಮಗಳ ಉಸ್ತುವಾರಿ ನೋಡಿಕೊಳ್ಳುವ ಅನಿವಾರ್ಯತೆಯಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸುವುದಿರಲ್ಲಿ ಕನಿಷ್ಠ ಗ್ರಾಹಕರ ಕರೆಗಳನ್ನೂ ಸ್ವೀಕರಿಸಿ ಸಮಾಧಾನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

Spread the love

Leave a Reply

Your email address will not be published. Required fields are marked *

error: Content is protected !!