ಪರಸಾಪುರ ಗ್ರಾಮದಲ್ಲಿ ಲಿಂಗೈಕ್ಯ ಪೂಜ್ಯಶ್ರೀ ಸದ್ಗುರು ಗುರುಶಾಂತಮೂರ್ತಿ ಮಹಾಶಿವಯೋಗಿಗಳ ಆರಾಧನಾ ಮಹೋತ್ಸವ ಹಾಗೂ ಮೂರನೇ ವರ್ಷದ ಭಕ್ತಿಯ ಪಾದಯಾತ್ರೆ
ಯಾದಗಿರಿ: ಪಾದಯಾತ್ರೆಯು ಕೇವಲ ಶೋಭೆಗಾಗಿ ಮಾಡುವ ಆಚರಣೆಯಾಗಬಾರದು. ಅದು ನಿಜವಾದ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವಾಗಬೇಕು. ಯುವಜನರು ಇಂತಹ ಭಕ್ತಿಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದುಶ್ಚಟಗಳನ್ನು ತ್ಯಜಿಸಬೇಕು, ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಹೇಳಿದರು.
ಯಾದಗಿರಿ ವಿಧಾನಸಭಾ ಕ್ಷೇತ್ರದ ಪರಸಾಪುರ ಗ್ರಾಮದಲ್ಲಿ ಲಿಂಗೈಕ್ಯ ಪೂಜ್ಯಶ್ರೀ ಸದ್ಗುರು ಗುರುಶಾಂತಮೂರ್ತಿ ಮಹಾಶಿವಯೋಗಿಗಳ ಆರಾಧನಾ ಮಹೋತ್ಸವ ಹಾಗೂ ಮೂರನೇ ವರ್ಷದ ಭಕ್ತಿಯ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸದ್ಗುರುಗಳ ಪಾದಯಾತ್ರೆ ಕೇವಲ ಧಾರ್ಮಿಕ ಉತ್ಸವವಲ್ಲ; ಇದು ಸಮಾಜದಲ್ಲಿ ಒಗ್ಗಟ್ಟನ್ನು, ಪ್ರೀತಿ ಮತ್ತು ಸೌಹಾರ್ದವನ್ನು ಬೆಳೆಸುವ ಮಹತ್ವದ ಪಯಣ. ನಂಬಿಕೆ, ಧರ್ಮ ಮತ್ತು ಸಂಸ್ಕೃತಿ ಜೀವನದಲ್ಲಿ ಎಷ್ಟು ಮುಖ್ಯವೆಂಬುದನ್ನು ಇಂತಹ ಕಾರ್ಯಕ್ರಮಗಳು ನಮಗೆ ನೆನಪಿಸುತ್ತವೆ ಎಂದರು.
ಮುಂದುವರಿದು, ಪಾದಯಾತ್ರೆ ಎನ್ನುವುದು ತಲೆಮಾರಿನಿಂದ ತಲೆಮಾರಿಗೆ ಸಾಗುವ ನಂಬಿಕೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವಜನರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಬಹುದು. ಸದ್ಗುರುಗಳ ಆಶೀರ್ವಾದವೇ ನಮ್ಮ ಶಕ್ತಿ ಮತ್ತು ದಾರಿ ತೋರಿಸುವ ಬೆಳಕು, ಎಂದು ಭಾವನಾತ್ಮಕವಾಗಿ ಹೇಳಿದರು. ಇದಕ್ಕೂ ಮುನ್ನ ಸದ್ಗುರುಗಳ ಪೀಠದಲ್ಲಿ ಪೂಜೆ ಸಲ್ಲಿಸಿ, ಭಕ್ತರೊಂದಿಗೆ ಪಾದಯಾತ್ರೆಯಲ್ಲಿ ನಡೆದು ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಶ್ರೀ ಶಾಂತಮೂರ್ತಿ ಸ್ವಾಮಿ ರುಕ್ಮಪುರ, ಚಂದ್ರಶೇಖರ ಮರ್ಕಲ್ ಮಾಜಿ ಎಪಿಎಂಸಿ ಅಧ್ಯಕ್ಷರು, ಬಸ್ಸಯ್ಯ ಸ್ವಾಮಿ ಕೆ ಹಯ್ಯಾಳ, ಸಿದ್ದರಾಮಯ್ಯ ಮುತ್ಯಾ ಪರಸಾಪುರ, ಅಯ್ಯಣ್ಣ ಗೌಡ, ಇಮಾಮ್ ಸಾಬ್, ನಿಂಗಯ್ಯಗೌಡ ಬಿರಾನೂರ,ಅಖಂಡಯ್ಯ ಸ್ವಾಮಿ ಪರಸಾಪುರ, ಅನ್ನಮ್ಮ ಗೌಡಸಾನಿ ಬೀರನೂರ, ಸಂತೋಷ್ ಕಾವಲಿ, ಗೋವಿಂದ ದಾಸಿ, ಮಲ್ಲಪ್ಪ, ಯಂಕಪ್ಪ ದಾಸಿಗೌಡ, ಶರಣಬಸವ, ಸೋಪಣ್ಣ, ಶಿವಣ್ಣ, ಭೀಮಯ್ಯ, ಮೌನೇಶ, ಹಣಮಂತ ದೇವಪುರ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
