ಕಲ್ಯಾಣ ಕರ್ನಾಟಕ ಭಾಗಕ್ಕೆ 600 ಬಸ್ | ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಯಾದಗಿರಿ: ಸಾರ್ವಜನಿಕರ ಜನದಟ್ಟಣೆಯ ಹಿನ್ನೆಲೆಯಲ್ಲಿ ಹೊಸದಾಗಿ ಎರಡು ಸಾವಿರ ಬಸ್ ಗಳನ್ನು ಖರೀದಿಸಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಮಾಧ್ವಾರ ಗ್ರಾಮದಲ್ಲಿ ಇಂದು ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು ಶಕ್ತಿ ಯೋಜನೆಯಿಂದಾಗಿ ಬಸ್ ಗಳಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದ್ದು, ಸಾರ್ವಜನಿಕರ ಜನದಟ್ಟಣೆಯು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಹೊಸದಾದ ಎರಡು ಸಾವಿರ ಬಸ್ಗಳನ್ನು ಖರೀದಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಸುಮಾರು 600 ರಿಂದ 700 ಬಸ್ಗಳನ್ನು ಇದರಲ್ಲಿ ಒದಗಿಸಲಾಗುವುದು ಎಂದು ಹೇಳಿದರು.

ರಸ್ತೆ ಸಾರಿಗೆ ನಿಗಮದಲ್ಲಿನ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. 10,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.ಈ ಹಿಂದಿನ ಸರ್ಕಾರಿ ಸಿಬ್ಬಂದಿಗಳ ಮಕ್ಕಳ ಅನುಕಂಪ ಆಧಾರಿತ 1000 ಹುದ್ದೆಗಳ ನೇಮಕಾತಿ ಹಾಗೂ 9000 ಬಸ್ ಚಾಲಕರ, ನಿರ್ವಾಹಕರ ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತ ತಕ್ಷಣ ನೇಮಕಾತಿ ಆಗಲಿದೆ ಎಂದು ಹೇಳಿದರು.

ಈ ಭಾಗದಲ್ಲಿ ಸೈದಾಪುರ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಬಸ್ ನಿಲ್ದಾಣದ ಅವಶ್ಯಕತೆ ಬಗ್ಗೆ ಕಲ್ಬುರ್ಗಿ ಸಂಸದರು ಹಾಗೂ ಗುರುಮಠಕಲ್ ಶಾಸಕ ರು ಗಮನಕ್ಕೆ ತಂದಿದ್ದು,ಸಂಸದರ ನಿಧಿ,ಶಾಸಕರ ನಿಧಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಥವಾ ಸಾರಿಗೆ ಸಂಸ್ಥೆ ನಿಗಮದ ಅನುದಾನದಡಿ ಈ ವರ್ಷದಲ್ಲಿಯೇ ತಲಾ 2.5 ಕೋ.ರೂಗಳಂತೆ ಅನುದಾನ ಒದಗಿಸಿ ಒಟ್ಟು 5 ಕೋ.ರೂ.ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಸೈದಾಪುರ ಬಸ್ ಡಿಪೋಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಬಸ್ ನಿಲ್ದಾಣಗಳಿಗೆ ದೇಶದ ಮಹನಿಯರ ನಾಮಕರಣ ಮಾಡುವುದು ಸಂತಸದ ಸಂಗತಿ.ಈ ಹಿನ್ನೆಲೆಯಲ್ಲಿ ಯಾದಗಿರಿ ಕೇಂದ್ರ ಬಸ್ ನಿಲ್ದಾಣಕ್ಕೆ ಮೈಲಾರ ಮಲ್ಲಯ್ಯನ ನಾಮಕರಣ ಹಾಗೂ ಗುರುಮಠಕಲ್ ಬಸ್ ನಿಲ್ದಾಣಕ್ಕೆ ಖಾಸಾಮಠದ ನಾಮಕರಣ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು ಎಂದು ಹೇಳಿದರು.

ಕಲ್ಬುರ್ಗಿ ಲೋಕಸಭಾ ಸದಸ್ಯ ಡಾ. ರಾಧಾಕೃಷ್ಣ ದೊಡಮನಿ ಅವರು ಮಾತನಾಡಿ,ಈ ಭಾಗದಲ್ಲಿ ಸಾರಿಗೆ ಸಂಪರ್ಕ ಹೆಚ್ಚಿಸಬೇಕು. ಗುರಮಠಕಲ್ ಬಸ್ ನಿಲ್ದಾಣಕ್ಕೆ ಖಾಸಾಮಠದ ನಾಮಕರಣಕ್ಕೆ ಕ್ರಮ ಕೈಗೊಳ್ಳುವಂತೆ ಹಾಗೂ ಸೈದಾಪುರ ಹೈಟೆಕ್ ಬಸ್ ನಿಲ್ದಾಣ ಮಂಜೂರಾತಿ ಗೆ ಕ್ರಮ ಕೈಗೊಳ್ಳಲು ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಅವರು, ಈ ಭಾಗದಲ್ಲಿ ಕೈಗಾರಿಕಾ ಕ್ಷೇತ್ರ ಬೆಳೆಯುತ್ತಿರುವದರಿಂದ ಸೈದಾಪುರ ಬಸ್ ನಿಲ್ದಾಣ ಮಂಜೂರು ಮಾಡಬೇಕು. ಈ ಭಾಗದ ದೇವಸ್ಥಾನ ಗಳ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ ನೀಡಬೇಕು. ಹೆಚ್ಚಿನ ಬ‌ಸ್ ಗಳ ಸೌಲಭ್ಯ ಕಲ್ಪಿಸಬೇಕು, ಯಾದಗಿರಿ ಬಸ್ ನಿಲ್ದಾಣಕ್ಕೆ ಮೈಲಾರ ಮಲ್ಲಯ್ಯನ ಹಾಗೂ ಗುರುಮಠಕಲ್ ಬಸ್ ನಿಲ್ದಾಣಕ್ಕೆ ಖಾಸಾಮಠದ ನಾಮಕರಣ ಮಾಡಲು ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಮ್.ರಾಚಪ್ಪ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕ್ರಪ್ಪ ಉಪಸ್ಥಿತರಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ್ ಕುಮಾರ್ ಚಂದರಗಿ ಸ್ವಾಗತಿಸಿದರು. ಶರಣಕುಮಾರ್ ವಟಾರ್ ಪ್ರಾರ್ಥಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!