ವಿದ್ಯಾರ್ಥಿಗಳೊಂದಿಗೆ ಸಂವಾದ | ಕಾಲೇಜು ಮೂಲ ಸೌಕರ್ಯ, ವಸತಿ ನಿಲಯ ಅವ್ಯವಸ್ಥೆ, ಸಾರಿಗೆ ಅನುಕೂಲ ಕಲ್ಪಿಸಲು ಮನವಿ | ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರ | ಡಿಗ್ರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಕ್ಕೆ ಸರ್ಕಾರಕ್ಕೆ ಪತ್ರ

ಗುರುಮಠಕಲ್ : ಹಿಂದುಳಿದ ವರ್ಗಗಳ ವಸತಿ ನಿಲಯ ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆ ಕುರಿತು ವಿದ್ಯಾರ್ಥಿನಿ ಶಾಸಕರ ಗಮನಕ್ಕೆ ತಂದಾಗ, 4-5ಕೋಟಿ ಬಿಲ್ಡಿಂಗ್ ತರಿಸ್ಕೊಂಡು ಒಂದು ಬೋರವೆಲ್ ಹಾಕಿಸಲು ಆಗಲ್ವಾ ಎಂದು ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಶಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉನ್ನತ ಸ್ಥಾನಗಳಿಗೆ ಹೋಗುವ ನಿಮಗೆಲ್ಲ, ಸಮರ್ಪಕ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಕಾಲೇಜು ಹಂತದಲ್ಲಿ ಇತ್ಯರ್ಥವಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.

ಶೈಕ್ಷಣಿಕ ಹಿತದೃಷ್ಟಿಯಿಂದ ನಗರ, ಗ್ರಾಮೀಣ ಭಾಗದ ಎಲ್ಲಾ ವಸತಿ ನಿಲಯಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು.

ಶಿಸ್ತು, ತಾಳ್ಮೆ ಜೀವನದಲ್ಲಿ ಮುಖ್ಯವಾಗಿದೆ. ಇದನ್ನು ಅಳವಡಿಸಿಕೊಂಡರೆ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಪಡಬೇಕು ಎಂದು ತಿಳಿಸಿದರು. ಉಪನ್ಯಾಸಕರು ಮಕ್ಕಳ ಜೀವನ ರೂಪಿಸಬೇಕು.

ಮುಂದಿನ ದಿನಗಳಲ್ಲಿ ಆರೋಗ್ಯ ಸುಧಾರಣೆಗೆ ಆಸ್ಪತ್ರೆಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು.

ಕೆಲದಿನಗಳ ಹಿಂದೆ ಬಾಲಕಿಯರ ವಸತಿ ನಿಲಯದಲ್ಲಿ ನೀರಿನ ಸಮಸ್ಯೆಯಿಂದ ಚರ್ಮ ಕಾಯಿಲೆಯಿಂದ ೧೨ ಜನ ಬಳಲಿದ್ದಾಗಿ ವಿದ್ಯಾರ್ಥಿ ಒಬ್ಬಳು ತಿಳಿಸಿದಳು.

ತಕ್ಷಣವೇ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿ ಕಾರಿಗಳನ್ನು ಸಂಪರ್ಕಿಸಿ, ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಗಮನಕ್ಕೆ ತಂದರು.

ಉಪನ್ಯಾಸಕರು – ಪ್ರಾಂಶುಪಾಲರ ಹೊಂದಾಣಿಕೆ ಅಗತ್ಯವಿದೆ. ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿನಿಯರಿಗೆ ಗೌರವಯುತವಾಗಿ ನಡೆಸಿಕೊಳ್ಳಲು ಏನು ಬೇಕೊ ವ್ಯವಸ್ಥೆ ಕಲ್ಪಿಸಲಾಗುವುದು, ಗ್ರಂಥಾಲಯ ಪುಸ್ತಕ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ದೊರಕಿಸಲು ಪ್ರಾಂಶುಪಾಲರಿಗೆ ಸೂಚಿಸಿದರು.

ಕಾಲೇಜು ಆವರಣದಲ್ಲಿ ರಾತ್ರಿ ವೇಳೆ ಮದ್ಯಪಾನ ಮಾಡಲಾಗುತ್ತಿದೆ. ಇದರಿಂದ ವಾತಾವರಣ ಹದಗೆಡುತ್ತಿದೆ ಎಂದು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದರು ತಕ್ಷಣವೇ ಎಸ್ಪಿ ಅವರಿಗೆ ಫೋನ್ ಕರೆ ಮಾಡಿದ ಶಾಸಕರು, ಮದ್ಯಪಾನ ಮಾಡುವುದು ತಡೆಯಲು ರಾತ್ರಿ ವೇಳೆ ಪೊಲೀಸರು ಗಸ್ತು ಮಾಡಿಸಲು ತಿಳಿಸಿದರು.

ಈ ವೇಳೆ ಪ್ರಾಂಶಪಾಲ ಡಾ.ಪುರುಷೋತ್ತಮ ಜೋಶಿ, ಪ್ರೊ. ಇಮ್ರಾನ್ ಖಾಜಿ, ಪ್ರೊ. ಆಂಜನೇಯ ವೇದಿಕೆಯಲ್ಲಿದ್ದರು. ಸಿಡಿಸಿ ಸದಸ್ಯರಾದ ನಾಗನಾಥರೆಡ್ಡಿ, ಗೋವಿಂದ ಮೇಂಗಜಿ, ಮಲ್ಲಮ್ಮ ಸೇರಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಹಲವು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡು ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು. ಪಟ್ಟಿ ಮಾಡಿಕೊಂಡು ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.

Spread the love

Leave a Reply

Your email address will not be published. Required fields are marked *

error: Content is protected !!