ಹಜರತ್ ಮೌಲಾಲಿ ದರ್ಗಾಕ್ಕೆ ಭಕ್ತರ ಹರಿಕೆ ಸಮರ್ಪಣೆ | ಕೇಳಿದ್ದನ್ನು ಕೊಡುವ ಪವಾಡ ಪುರುಷನಿಗೆ ನಮನ ಸಲ್ಲಿಕೆ

ಮುಧೋಳ (ಸೇಡಂ): ಇಲ್ಲಿಗೆ ಸಮೀಪದ ರಾಘಪೂರದ ಹಜರತ್ ಮೌಲಾಲಿ –ತಿಪ್ಪಯ್ಯ ಮುತ್ಯ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ. ನಂಬಿ ನಡೆಯುವ ಭಕ್ತರ ಹಿತ ಕಾಯುತ್ತಿರುವ ಪವಾಡ ಪುರುಷನಿಗೆ ನೂರಾರು ಭಕ್ತರು ಹರಕೆ ಸಮರ್ಪಿಸಿದರು.

ಗುರುವಾರ ಸೇಡಂ ತಾಲೂಕಿನ ಪವಿತ್ರ ಕ್ಷೇತ್ರ ರಾಘಪೂರದ ಹಜರತ್ ಮೌಲಾಲಿ ದರ್ಗಾದಲ್ಲಿ ಸುತ್ತಮುತ್ತಲಿನ ಗ್ರಾಮಗಳು ಸೇರಿ ಯಾದಗಿರಿ ಜಿಲ್ಲೆ ಹಾಗೂ ತೆಲಂಗಾಣದ ಹಲವಾರು ಭಕ್ತರು ತಾವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ತಲೆಯ ಮೇಲೆ ಜ್ಯೋತಿ ಹೊತ್ತು ಕಾಲ್ನಡಿಗೆಯಲ್ಲಿ ಗುಡ್ಡ ಹತ್ತುವ ಭಕ್ತರು ಜಯ ಘೋಷಗಳೊಂದಿಗೆ ಸಾಗಿದರು. ದರ್ಗಾ ಗೆ ಬಂದು ಶ್ರದ್ಧಾ – ಭಕ್ತಿಯಿಂದ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕೋನಾಪುರದ ನರಸಪ್ಪ, ತನ್ನ ಮಗಳಿಗೆ ಗಂಡು ಮಗು ಬೇಕು ಎಂದು ಬೇಡಿಕೊಂಡಿದ್ದೆ. ನಮ್ಮ ಬೇಡಿಕೆ ಈಡೇರಿದ್ದರಿಂದ ಹರಿಕೆ ಸಮರ್ಪಣೆ ಮಾಡಿದ್ದೇನೆ. ನಮ್ಮ ತಾತ, ತಂದೆ ಕಾಲದಿಂದಲೂ ಇಲ್ಲಿ ನಡೆದುಕೊಳ್ಳುತ್ತಿದ್ದು ಕುಟುಂಬದ ಜನರಿಗೆ ಒಳ್ಳೆಯದಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಿತ್ಯ ದರ್ಗಾಕ್ಕೆ ಬರುವ ಭಕ್ತರು ಪೂಜ್ಯ ತಿಪ್ಪಯ್ಯ ಮುತ್ಯ ಅವರ ಬಳಿ ಹೇಳಿಕೆ ಕೇಳಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ರಾಜ್ಯ, ನೆರೆಯ ತೆಲಂಗಾಣ, ಆಂಧ್ರದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಿರುವುದು ಇಲ್ಲಿನ ಭಕ್ತರ ನಂಬಿಕೆ.

Spread the love

Leave a Reply

Your email address will not be published. Required fields are marked *

error: Content is protected !!