ರಾಚಪ್ಪಯ್ಯ ಕಡ್ಲಪ್ಪಯ್ಯನವರ ಅದ್ಧೂರಿ ಜಾತ್ರಾ ಮಹೋತ್ಸವ | ಸುಡು ಬಿಸಿಲಿನಲ್ಲಿ ಕೆಂಡ ಹಾಯ್ದ ಭಕ್ತರು
ಯಾದಗಿರಿ: ಸೂರ್ಯನ ಶಕೆಗೆ ಸ್ಪರ್ಧೆ ಒಡ್ಡುವಂತೆ ಚೌಕಾಕರದಲ್ಲಿ ಹರಡಿದ ಕೆಂಡದ ಮಧ್ಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ, ಮಂಗಳ ವಾದ್ಯಗಳು, ಪುರವಂತರು, ಕಳಸ ಹಿಡಿದ ಸುಮಂಗಲಿಯರು, ಅನೇಕ ಭಕ್ತರು ಕೆಂಡವನ್ನು ಹಾಯುವ ಭಕ್ತಿ ಪರಾಕಾಷ್ಠೆಯ ದೃಶ್ಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ರಾಚಪ್ಪಯ್ಯ ಕಡ್ಲಪ್ಪಯ್ಯನವರ ಜಾತ್ರೆಯಲ್ಲಿ ಕಂಡುಬಂತು.
ಗಾಜರಕೋಟ ಗ್ರಾಮದಲ್ಲಿ ರಾಚಪ್ಪಯ್ಯ ಕಡ್ಲಪ್ಪಯ್ಯನವರ ಜಾತ್ರಾ ಮಹೋತ್ಸವವು ಮಂಗಳವಾರ ಬಹು ವಿಜ್ರುಂಭಣೆಯಿಂದ ಜರುಗಿತು. ಬೆಳಿಗ್ಗೆ ರಾಚಪ್ಪಯ್ಯ ಕಡ್ಲಪ್ಪಯ್ಯನವರ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಯು ಮಂತ್ರ ಘೋಷಗಳ ಮಧ್ಯೆ ನಡೆಯಿತು.
ಮದ್ಯಾಹ್ನ ರಾಚಪ್ಪಯ್ಯ ಕಡ್ಲಪ್ಪಯ್ಯನವರ ಉತ್ಸವ ಮೂರ್ತಿಗಳನ್ನು ಹೊತ್ತ ಹೊತ್ತ ಪಲ್ಲಕ್ಕಿಯ ಮೆರವಣಿಗೆಯು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ಸುಮಂಗಲೆಯರ ಕುಂಭ ಕಳಸ, ಪುರುವಂತರ ಕುಣಿತ ಮೆರವಣಿಗೆಗೆ ಹೆಚ್ಚಿನ ಕಳೆ ತಂದುಕೊಟ್ಟವು. ಪಲ್ಲಕ್ಕಿ ಮೆರವಣಿಗೆ ಬಸವಣ್ಣ ದೇವಸ್ಥಾನ, ಮಹಾದೇವ ದೇವಸ್ಥಾನ ಮಾರ್ಗವಾಗಿ ರಾಚಪ್ಪಯ್ಯ ಕಡ್ಲಪ್ಪಯ್ಯ ದೇವಸ್ಥಾನದ ಆವರಣದ ಅಗ್ನಿಕುಂಡ ಸ್ಥಳಕ್ಕೆ ಬಂದು ತಲುಪಿತು.
ನಂತರ ಅಗ್ನಿಕುಂಡದ ಸುತ್ತ ಪಲ್ಲಕ್ಕಿಯನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿ ಪರಾಕಾಷ್ಟೆಯಿಂದ ಅಗ್ನಿಕುಂಡವನ್ನು ಹಾಯ್ದು ದೇವಸ್ಥಾನ ಪ್ರವೇಶಿಸುವ ಮೂಲಕ ಪಲ್ಲಕ್ಕಿ ಮೆರವಣಿಗೆಯು ಸಂಪನ್ನವಾಯಿತು. ಈ ಸಂದರ್ಭದಲ್ಲಿ ಪಲ್ಲಕ್ಕಿಯನ್ನು ಹೊತ್ತವರು, ಪುರುವಂತರು, ಮಹಿಳೆಯರು ಸೇರಿದಂತೆ ಅನೇಕ ಭಕ್ತರು ಬಿಸಿಲ ಬೇಗೆಯನ್ನು ಲೆಕ್ಕಿಸದೆ ಭಕ್ತಿ ಪರಾಕಾಷ್ಠೆಯಿಂದ ದೇವರನ್ನು ಸ್ಮರಿಸುತ್ತಾ ಸುಡುವ ಅಗ್ನಿಕುಂಡದಲ್ಲಿನ ಕೆಂಡ ಹಾಯ್ದರು. ಮೆರವಣಿಗೆಯುದ್ದಕ್ಕೂ ಪುರುವಂತರು ವೀರಭದ್ರದೇವರ ಒಡಪುಗಳನ್ನು ಹೇಳುತ್ತಾ, ಶಸ್ತ್ರಗಳನ್ನು ಹಾಕಿಕೊಳ್ಳುವ ದೃಶ್ಯ ಕಂಡುಬಂತು.
ಸಾಯಂಕಾಲ ಅಪಾರ ಭಕ್ತ ಸಮೂಹದ ಜಯ ಘೋಷ ಗಳೊಂದಿಗೆ ರಾಚಪ್ಪಯ್ಯ ಕಡ್ಲಪ್ಪಯ್ಯನವರ ಭವ್ಯ ರಥೋತ್ಸವವು ವೈಭವದಿಂದ ಜರುಗಿತು. ರಾಚಪ್ಪಯ್ಯ ಕಡ್ಲಪ್ಪಯ್ಯ ಮಹಾರಾಜ ಕೀ ಜೈ ಎಂಬ ಭಕ್ತರಘೋಷಣೆ ಮುಗಿಲು ಮುಟ್ಟಿತು. ನಾನಾ ಕಡೆಯಿಂದ ಬಂದ ಭಕ್ತಾಧಿಗಳು ದೇವರದರ್ಶನ ಪಡೆದುಕೊಂಡು ಹೂವು ಕಾಯಿ ಅರ್ಪಿಸಿದರು. ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಉತ್ತತ್ತಿ, ಭಾಳೆ ಹಣ್ಣನ್ನು ಬೀಸಿ ನಮಸ್ಕರಿಸಿದರು. ಈ ಸಂದರ್ಭದಲ್ಲಿ ಊರಿನ ಗಣ್ಯರು, ದೇವಸ್ಥಾನದ ಅರ್ಚಕರು, ಸುತ್ತಲಿನ ಗ್ರಾಮದ ಭಕ್ತರು ಫಾಲ್ಗೊಂಡಿದ್ದರು.
