ಡಾ.ಬಾಬು ಜಗಜೀವನ ರಾಮ್ ಜಯಂತೋತ್ಸವ | ಯಾದಗಿರಿ ಕರವೇ ಕಚೇರಿಯಲ್ಲಿ ಗೌರವ
ಬೀದರ: ಭಾರತದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರು ಶೋಷಿತ ಸಮುದಾಯದಿಂದ ಬಂದು ದೇಶದ ಉಪಪ್ರಧಾನಿ ಹುದ್ದೆಯವರೆಗೆ ಏರಿದ ಅಪ್ರತಿಮ ನಾಯಕ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಹೇಳಿದರು.
ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಿದ ಡಾ. ಬಾಬು ಜಗಜೀವನ ರಾಮ್ ರವರ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1970ರ ದಶಕದಲ್ಲಿ ಭಾರತವು ಎದುರಿಸುತ್ತಿದ್ದ ತೀವ್ರ ಆಹಾರ ಸಮಸ್ಯೆಯನ್ನು ನೀಗಿಸಿ, ಕೃಷಿಯಲ್ಲಿ ದೇಶವನ್ನು ಸ್ವಾವಲಂಬಿ ಯಾಗಿಸಿದ ಕೀರ್ತಿ ಬಾಬು ಜಗಜೀವನ ರಾಮ್ ರವರಿಗೆ ಸಲ್ಲುತ್ತದೆ, ಆದ್ದರಿಂದಲೇ ಅವರ ಜನ್ಮದಿನವಾದ ಏಪ್ರಿಲ್ 5 ಅನ್ನು ನಾವು ‘ಸಮತಾ ದಿನ’ ಎಂದು ಆಚರಿಸುತ್ತೇವೆ. ಸುಮಾರು ಮೂರು ದಶಕಗಳ ಕಾಲ ಕೇಂದ್ರ ಸಚಿವರಾಗಿ, ರಕ್ಷಣಾ ಸಚಿವರಾಗಿ 1971ರ ಯುದ್ಧದ ಸಮಯದಲ್ಲಿ ಮತ್ತು ಕೃಷಿ ಸಚಿವರಾಗಿ ಅವರು ನೀಡಿದ ಕೊಡುಗೆ ಅನನ್ಯ. ಸಮಾನತೆಯ ಸಿದ್ಧಾಂತದ ಪ್ರತಿಪಾದಕರಾಗಿದ್ದ ಬಾಬೂಜಿಯವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಬಾಬು ಜಗಜೀವನರಾಮ್ ಅವರ ಭವನ ನಿರ್ಮಾಣಕ್ಕೆ ಈಗಾಗಲೇ 2 ಕೋಟಿ ಅನುದಾನ ನೀಡಲಾಗಿದೆ ಅವಶ್ಯಕತೆ ಅನುಗುಣವಾಗಿ ಇನ್ನು ಹೆಚ್ಚಿನ ಅನುಧಾನ ನೀಡಲಾಗುವುದು. ವೃತ್ತ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಬಾಬು ಜಗಜೀವನ್ ರಾಮ್ ಅವರ ಜನ್ಮದಿನಾಚರಣೆಯ ಸಂದೇಶ ಕಳುಹಿಸಿದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಭಾರತದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ದಿವಂಗತ ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನದ (ಸಮತಾ ದಿನ) ಅಂಗವಾಗಿ ಅವರಿಗೆ ಭಕ್ತಿಪೂರ್ವಕ ನಮನಗಳು. ಬಿಹಾರದ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಅಸ್ಪೃಶ್ಯತೆಯ ಸವಾಲುಗಳನ್ನು ಮೆಟ್ಟಿ ನಿಂತು ದೇಶದ ಅತ್ಯುನ್ನತ ನಾಯಕರಾಗಿ ಬೆಳೆದ ಇವರು, ಕೃಷಿ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಿದ ಕೀರ್ತಿವಂತರು ಎಂದಿದ್ದಾರೆ.
ಶೋಷಿತರು, ರೈತರ ಧ್ವನಿಯಾಗಿ ಶ್ರಮಿಸಿದ ಬಾಬೂಜಿಯವರ ಸಮಾನತೆಯ ಆದರ್ಶಗಳು ಇಂದಿಗೂ ನಮಗೆ ಮಾರ್ಗದರ್ಶಕವಾಗಿವೆ. ಅವರ ತತ್ವಗಳನ್ನು ಪಾಲಿಸುವ ಸಂಕಲ್ಪ ಮಾಡೋಣ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾದೇವಿ ಹೆಬ್ಬಾಳೆ ಡಾ. ಬಾಬು ಜಗಜೀವನ ರಾಮ್ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮಹಮ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಯೋಗೇಶ್ ಎಸ್. ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಪ್ರಮುಖರಾದ ಚಂದ್ರಕಾಂತ್ ಹಿಪ್ಪಳಗಾಂವ್, ಫಾರ್ನಾಡಿಸ್ ಹಿಪ್ಪಳಗಾಂವ್, ಮಾರುತಿ ಬೌದ್ಧೆ, ರಾಜು ಕಡ್ಯಾಳ, ವಿಜಯಕುಮಾರ್ ಸೋನಾರೆ, ರವಿರಾಜ್ ಘೋಡೆ, ಅಭಿ ಕಾಳೆ, ಶಾಮಣ್ಣ ಬಾವಗೆ, ಮಹೇಶ್ ದೊಡ್ಡಿ, ಶಾಮಣ್ಣ ಬೊಂಬಳಗಿ, ರವಿ ನಿಜಾಮಪುರ ಸೇರಿದಂತೆ ಅನೇಕು ಇದ್ದರು.
