ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅವರ ದಕ್ಷತೆಗೆ ಒಲಿದ ಗೌರವ | ಜಿಲ್ಲೆಯ ಪಿಎಸ್ಐ, ಮುಖ್ಯಪೇದೆಗೆ ಮುಖ್ಯಮಂತ್ರಿ ಪದಕ ಪ್ರದಾನ
ಯಾದಗಿರಿ: ಗಿರಿ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ, ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ನೀಡುತ್ತಿರುವ ಎಸ್ಪಿ ಪೃಥ್ವಿಕ್ ಶಂಕರ್ ಅವರು ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ನಗರ ಠಾಣೆ ಪಿಎಸ್ಐ ಮಂಜನಗೌಡ ಪಾಟೀಲ್ ಹಾಗೂ ಸೈಬರ್ ವಿಭಾಗದ ಮುಖ್ಯಪೇದೆ ವಸಂತ ಕುಮಾರ ಅವರಿಗೂ ಪದಕ ಸಿಕ್ಕಿದೆ.
ಪೊಲೀಸ್ ಧ್ವಜ ದಿನ ಹಿನ್ನೆಲೆ ಬೆಂಗಳೂರಿನ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರದಾನ ಮಾಡಿದರು. ಇದಕ್ಕೂ ಮೊದಲು ಆಕರ್ಷಕ ಪಥ ಸಂಚಲನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ಡಿಜಿ, ಐಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ಶ್ರೇಷ್ಠ ಸೇವೆ ಸಲ್ಲಿಸಿದ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕಗಳನ್ನು ಪ್ರದಾನ ಮಾಡಲಾಯಿತು. ಪೊಲೀಸ್ ಸಿಬ್ಬಂದಿಯ ತ್ಯಾಗ, ಶೌರ್ಯ ಮತ್ತು ಸಮರ್ಪಣೆಯನ್ನು ಸ್ಮರಿಸುವ ಈ ದಿನವು ರಾಜ್ಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಯಾದಗಿರಿಯಲ್ಲಿ ಪೊಲೀಸ್ ಧ್ವಜ ದಿನ: ಯಾದಗಿರ ಜಿಲ್ಲಾ ಪೊಲೀಸ್ ವತಿಯಿಂದ “ಪೊಲೀಸ್ ಧ್ವಜ ದಿನಾಚರಣೆ” ಅಂಗವಾಗಿ ನಿವೃತ್ತ ಉಪ ಅಧೀಕ್ಷಕರು ಅರುಣಕುಮಾರ ಕೊಳೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಗೌರವ ಸ್ವೀಕರಿಸಿದರು. ನಿವೃತ್ತ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಗಳು ಮತ್ತು ಅವರ ಕುಟುಂಬಸ್ಥರು ಭಾಗವಹಿಸಿದ್ದರು
