ಬೀದರ: ಬೀದರ್ನಲ್ಲಿ ಜನೇವರಿ-2027 ರಲ್ಲಿ ಬಹುವರ್ಷಗಳ ನಂತರ ಅಗ್ನಿವೀರ ಸೇನಾ ಭರ್ತಿ ರ್ಯಾಲಿ ಜರುಗಲಿದ್ದು, ಬೀದರ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಲಾಭ ಪಡೆಯಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಶುಕ್ರವಾರ ಬೀದರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾಡನಾಡುತ್ತಾ, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಯುವಕರು ಈ ಸೇನಾ ಭರ್ತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ಬೀದರ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಬೀದರನ ನೆಹರು ಕ್ರೀಡಾಂಗಣದಲ್ಲಿ ಸೇನಾ ಭರ್ತಿ ರ್ಯಾಲಿ ಜರುಗಲಿದ್ದು, ರ್ಯಾಲಿ ಯಶಸ್ವಿಗೊಳ್ಳಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡುವುದುದಾಗಿ ತಿಳಿಸಿದರು.
ಅಗ್ನಿವೀರ ಸೇನಾ ಭರ್ತಿ ರ್ಯಾಲಿ ಬಗ್ಗೆ ಮಾತನಾಡಿದ ಕರ್ನಲ್ ಅಶ್ವಿನಿ ಅವರು, ಬೀದರನಲ್ಲಿ 5 ವರ್ಷಗಳ ನಂತರ ರ್ಯಾಲಿ ಜರುಗಲಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಯುವಕರು ವಿಶೇಷವಾಗಿ ಬೀದರ ಜಿಲ್ಲೆಯ ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು. ಬೀದರ ಜಿಲ್ಲೆಯ ಆಭ್ಯರ್ಥಿಗಳು ತೀರ ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ, ಯುವರಲ್ಲಿ ಸೇನಾ ಭರ್ತಿ ಬಗ್ಗೆ ಹೆಚ್ಚಿನ ಅರಿವು ಪ್ರಚಾರ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
