ಮೇ 9ರಂದು ಬಿಎಸ್ ವೈ- 50 ಸಾರ್ಥಕ ವರ್ಷ ಕಾರ್ಯಕ್ರಮ | ಗಿರಿ ಜಿಲ್ಲೆಯಿಂದ ಐದು ಸಾವಿರ ಕಾರ್ಯಕರ್ತರು
ಯಾದಗಿರಿ: ಚಿತ್ರದುರ್ಗದಲ್ಲಿ ಮೇ 9 ರಂದು ಆಯೋಜಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ 50 ಸಾರ್ಥಕ ವರ್ಷದ ಕಾರ್ಯಕ್ರಮಕ್ಕೆ ಗಿರಿಜಿಲ್ಲೆಯಿಂದ ಐದು ಸಾವಿರ ಬಿಜೆಪಿ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ತೆರಳಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಗೆ ಬಿಎಸ್ ವೈ ಅವರ ಕೊಡುಗೆ ಅಪಾರವಾಗಿದೆ. ಜಿಲ್ಲೆಯಾಗಲು ಅವರೇ ಕಾರಣ, ಹೀಗಾಗಿ ಚಿತ್ರದುರ್ಗದ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿಯಿಂದ ವಿಶೇಷ ಸನ್ಮಾನ ಜರುಗಲಿದೆ ಎಂದರು.
ವೀರಶೈವ ಧರ್ಮದ ಪಂಚಪೀಠಗಳ ಜಗದ್ಗುರುಗಳು, ನಾಡಿನ ಹೆಸರಾಂತ ಮಠಗಳ ಶ್ರೀಗಳು, ವಿವಿಧ ಸಮುದಾಯಗಳ ಗುರುಗಳು ಭಾಗವಹಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮವನ್ನು ಗೃಹ ಸಚಿವ ಅಮೀತ ಶಾ ಅವರು ಉದ್ಘಾಟಿಸಲಿದ್ದಾರೆಂದರು.
ಮಾಜಿ ಸಚಿವ, ಹಾಲಿ ಸಂಸದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆ ವಹಿಸಲಿದ್ದಾರೆಂದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಮುಖಂಡರಾದ ರಾಚಣ್ಣಗೌಡ ಮುದ್ನಾಳ, ನಾಗರತ್ನ ಕುಪ್ಪಿ, ದೇವೆಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ,ವೆಂಕಟರೆಡ್ಡಿ ಅಬ್ಬೆತುಮಕೂರು, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಇತರರಿದ್ದರು.
