ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ | ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ
ಗುರುಮಠಕಲ್: ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು, ಮುಂಗಾರು ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು, ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ವತಿಯಿಂದ ಪಟ್ಟಣದ ಸಿಹಿನೀರು ಬಾವಿಯಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಬಳಿಕ ತಹಸೀಲ್ದಾರರು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಮಾತನಾಡಿದ ಜಯ ಕರ್ನಾಟಕ ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ, ಗುರುಮಠಕಲ್ ತಾಲೂಕು ಗಡಿ ಭಾಗ ಆಗಿದ್ದು ಇಲ್ಲಿನ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ ಆದರೆ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನಾದ್ಯಂತ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ ತೊಗರಿ, ಹತ್ತಿ, ಶೇಂಗಾ, ಹೆಸರು, ಉದ್ದು, ಬಿತ್ತಿದ ರೈತರು ಮಳೆ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿರುವುದನ್ನು ನೋಡಿ ಅನ್ನದಾತ ಕಣ್ಣೀರು ಸುರಿಸುತ್ತಿದ್ದಾನೆ.
ಸರ್ಕಾರ ಈ ಕೂಡಲೇ ಆರ್ಥಿಕ ಹಾನಿಯ ವರದಿಗಾಗಿ ಕಾಯದೆ ತಕ್ಷಣ ಮಧ್ಯಂತರ ಬರ ಪರಿಹಾರ ಘೋಷಿಸಿ, ರೈತರ ನೆರವಿಗೆ ಧಾವಿಸಬೇಕು. ಅಲ್ಪ ಪ್ರಮಾಣದ ಮಳೆಯನ್ನು ನಂಬಿ ಹೆಚ್ಚಿನ ಪಸಲು ಬರಬಹುದು ಎಂದು ಬ್ಯಾಂಕ್ ಸೇರಿದಂತೆ ವಿವಿಧೆಡೆ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ರೈತರು ಬಿತ್ತನೆ ಮಾಡಿದ ರೈತರಿಗೆ, ಮಳೆ ಸಂಪೂರ್ಣ ಕೈಕೊಟ್ಟ ಕಾರಣ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಅಲ್ಲದೆ ಗುಳೆ ಹೋಗುತ್ತಿದ್ದಾರೆ.
ಮಳೆ ಕೊರತೆಯಿಂದ ಜಲಾಶಯಗಳು, ಕೆರೆ-ಕಟ್ಟೆಗಳು ಬತ್ತುತ್ತಿದ್ದು, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಿಸಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವುದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿನ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಕಾಕಲವಾರ, ನರಸಿಂಹಲು ಗಂಗನೋಳ, ರಾಮುಲು ಕೊಡಗಂಟಿ, ಕಾಶಪ್ಪ ಮನ್ನೆ, ರಾಜು ಪುರುಷೋತ್ತಮ, ಮಲ್ಲಿಕಾರ್ಜುನ ಚೆಪೆಟ್ಲಾ, ಅಯಾಝ್ ಅಲಿ, ರವಿಕುಮಾರ್ ವಾರದ, ಸಿದ್ದಪ್ಪ ಮದ್ದೂರು, ಮಲ್ಲಿಕಾರ್ಜುನ ಗಣಪುರ, ಭೀಮಪ್ಪ ಸಿದ್ದಾಪುರ, ಶ್ರೀನಿವಾಸ ಪಟೇಲ್, ಸಾಬಣ್ಣ, ಮಲ್ಲರೆಡ್ಡಿ ಅಮ್ಮಪಲ್ಲಿ, ವೀರೇಶ್ ಪಸ್ಪುಲ್, ವಿಜಯಕುಮಾರ್ ಕೊಂಕಲ, ಹುಸೇನ್ ಚಂಡರಕಿ, ನಾಗೇಶ್ ಮಡೆಪಲ್ಲಿ, ದೇವು ಪರಮೇಶ್ ಪಲ್ಲಿ, ಬಾಬು ದೊರೆ ತಾತಳಗೇರಾ, ಚಾಂದ್ ಕಾಕಲವಾರ, ಬನ್ನಪ್ಪ ಚಿಂತನಹಳ್ಳಿ, ಹನುಮೇಶ, ಶರಣಪ್ಪ, ಜಗಪ್ಪ, ಆನಂದ್, ಸೇರಿದಂತೆ ಸಂಘಟನೆಯ ಹಲವರು ಕಾರ್ಯಕರ್ತರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.
