ನಲ್ಗೊಂಡ ಆಶ್ರಮಕ್ಕೆ ಸೇರಿದ ಆಸ್ತಿ ಕಬಳಿಸಲು ಸಂಚು ಆರೋಪ | ಈ ಹಿಂದೆ ಇದೇ ವಿಚಾರಕ್ಕೆ ಜೈಲು ಸೇರಿದ್ದ ಈಶ್ವರಿ ಮಾತಾ ಅವರ ತಂದೆ | ಕೆಲವರನ್ನು ಸೇರಿಸಿಕೊಂಡು ಆಶ್ರಯಕ್ಕೆ ಕೆಟ್ಟ ಹೆಸರು ತರುವ ಪಾಪದ ಕೆಲಸ ಕೈ ಹಾಕಿರುವುದಕ್ಕೆ ಖಂಡನೆ

ಗುರುಮಠಕಲ್ / ಸೇಡಂ : ನಲ್ಗೊಂಡದ ಅಮ್ಮ ನವರ ಆಶ್ರಯದ ಆಸ್ತಿ ಕಬಳಿಸಲು ಈಶ್ವರಿ ಮಾತಾ ಅವರು ಕೆಲವರನ್ನು ಸೇರಿಸಿಕೊಂಡು ಷಡ್ಯಂತ್ರ ರಚಿಸುತ್ತಿರುವುದು ಖಂಡನೀಯ ಎಂದು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಅಧ್ಯಕ್ಷ ಶಿವಯ್ಯ ಸ್ವಾಮಿ ಸೇರಿದಂತೆ ಹಲವರು ಖಂಡಿಸಿದರು.

ಸೇಡಂ ತಾಲೂಕಿನ ಯಾನಾಗುಂದಿ ಆಶ್ರಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಲ್ಗೊಂಡ ಆಶ್ರಮವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಳ್ಳಬೇಕು ಎಂದು, ಈ ಹಿಂದೆ ಈಶ್ವರಿ ಅವರ ತಂದೆ ಸ್ವಯಂ ಘೋಷಿತ ದೇವಮಾನವರಾಗಿ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದನ್ನು ಮನಗಂಡು ಸ್ವತಾ ಅಮ್ಮನವರೇ ನಲ್ಗೊಂಡ ಆಶ್ರಮವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಅದನ್ನು ರಕ್ಷಿಸಬೇಕು ಎಂದು ಶಿವಯ್ಯ ಸ್ವಾಮಿ ಸೇರಿದಂತೆ ಅಲ್ಲಿನ ಪ್ರಮುಖರಿಗೆ ಆಜ್ಞೆ ಮಾಡಿದ್ದರು, ಆಗ ಕಾನೂನು ಮೂಲಕ ಕ್ರಮವಹಿಸಲಾಗಿತ್ತು ಎಂದು ನಲ್ಗೊಂಡ ಆಶ್ರಮದ ಗಂಗಾಧರ ಸ್ವಾಮಿ ವಿವರಿಸಿದರು.

ಈಶ್ವರಿ ಅವರ ತಂದೆ ವೀರಬೋಗ ವಸಂತರಾಯ ಅವತಾರ ಆಗಿದ್ದೇನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಗ, ಯಾನಾಗುಂದಿ ಆಶ್ರಮಕ್ಕೆ ಮಾತಾಜಿ ಆತನನ್ನು ಕರೆಯಿಸಿ, ಆ ರೀತಿ ಪ್ರಚಾರ ಮಾಡುತ್ತಿದ್ದಲ್ಲಿ, ಮಾತಾಜಿ ಭಾವಚಿತ್ರ ಮತ್ತು ಹೆಸರನ್ನು ಬಳಸಬಾರದು ಎಂದು ಎಚ್ಚರಿಸಿದರು ಎಂದು ವಿವರಿಸಿದರು. ಶಿವಯ್ಯ ತಮಗೆ ಅಡ್ಡಿಯಾಗಿದ್ದಾರೆ, ಅವರನ್ನು ದಬಾಯಿಸಿ ನಲ್ಗೊಂಡ ಕಡೆ ತಲೆ ಹಾಕಬಾರದು ಎನ್ನುವ ಷಡ್ಯಂತ್ರ ರಚಿಸಿ, ಇಡೀ ಅಮ್ಮನವರ ಭಕ್ತರ ಮನಸ್ಸು ನೋಯಿಸಿ, ಆಶ್ರಮದ ಹೆಸರಿಗೆ ಕಳಂಕ ತರುವ ಕಾರ್ಯ ಮಾಡುತ್ತಿರುವುದು ಸರಿಯಲ್ಲ ಎಂದರು.

ನಲ್ಗೊಂಡ ಆಶ್ರಮಕ್ಕೆ ಸೇರಿದ 14 ಎಕರೆ ಜಮೀನು, ಆಶ್ರಮ, ಗೋಶಾಲೆ, ಆಂಜನೇಯ ದೇವಸ್ಥಾನ ಸೇರಿದಂತೆ 30 ಕೋಟಿಯಷ್ಟು ಆಸ್ತಿ ಮೇಲೆ ಅವರ ಕಣ್ಣಿದೆ. ಅದು ಅಮ್ಮನವರ ಭಕ್ತರು ನೀಡಿದ್ದು, ಅದು ಆಶ್ರಮಕ್ಕೆ ಸೇರಿದ್ದು ಹೊರತು ಅದರಲ್ಲಿ ಯಾರು ಹಕ್ಕು ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಾತಾ ಮಾಣಿಕೇಶ್ವರಿ ಅವರನ್ನು ಬದುಕಿದ್ದಾಗಲೇ ಲಿಂಗದಲ್ಲಿ ಲೀನ ಮಾಡಿಸಿದ್ದಾರೆ. ಇದರ ಕುರಿತು ತನಿಖೆ ನಡೆಸುವಂತೆ ದೂರು ಸಲ್ಲಿಸಿರುವುದಕ್ಕೆ ಖಂಡಿಸುತ್ತೇನೆ. ಮಾತಾಜಿ ಸಾಕ್ಷತ್ ಭಗವಂತ ಸ್ವರೂಪ ಆಗಿದ್ದಾರೆ. ಕಣ ಕಣದಲ್ಲಿ ಅಮ್ಮ ಇದ್ದಾರೆ, ಅವರನ್ನು ಬಲವಂತವಾಗಿ ಯಾರು ಬಂಧಿಸಿ ಲಿಂಗದಲ್ಲಿ ಕೂಡಿಸಿ ಐಕ್ಯ ಮಾಡಲು ಸಾಧ್ಯವಿಲ್ಲ. ಮಾತಾಜಿ ಮನಸ್ಸು ಮಾಡಿದರೆ ಈಗಲೂ ಎದ್ದು ಬರಬಹದು. ಇದಕ್ಕೆ 21ನೇ ವಯಸ್ಸಿನಲ್ಲಿ ವಾಯು ದಿಗ್ಬಂಧನ ಮಾಡಿ ಬದುಕಿ ಬಂದಿದ್ದು, 45 ದಿನಗಳ ಕಾಲ ಯೋಗ ಧ್ಯಾನದಲ್ಲಿದ್ದು ಮತ್ತೆ ದರ್ಶನ ನೀಡುರುವ ನಿದರ್ಶನಗಳಿವೆ ಎಂದರು.

ಮಾತಾಜಿ ಅವರ ಪಲ್ಸ್ ನಿಂತಿದೆ ಎಂಬುದನ್ನು ಗುರುಮಠಕಲ್ ಸರಕಾರಿ ವೈದ್ಯರು ಲಿಖಿತದಲ್ಲಿ ಖಾತ್ರಿ ಪಡಿಸಿದ ನಂತರ ಮೂರು ದಿನಗಳ ಕಾಲ ಭಕ್ತರಿಗಾಗಿ ದರ್ಶನ ಕಲ್ಪಿಸಿ, ಸರಕಾರಿ ಸಕಲ ಗೌರವದೊಂದಿಗೆ ಲಿಂಗದಲ್ಲಿ ಐಕ್ಯ ಮಾಡಲಾಯಿತು. ವಿನಾಕಾರಣ ಮಾತಾಜಿ ಕುರಿತು ಸುಳ್ಳು ಆರೋಪ ಮಾಡಬಾರದು ಎಂದರು. ಈಶ್ವರಿ ಅವರು ಸ್ವಂತ ಲಾಭಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ, ಕೆಲ ಅಸಮಾಧಾನಿತರನ್ನು ಬಳಸಿಕೊಂಡು ಸಂಚು ನಡೆಸುತ್ತಿದ್ದಾರೆ. ನಾವೆಲ್ಲ ಅಮ್ಮನ ಮಕ್ಕಳೇ ಅವರ ಹೆಸರು ಬಳಸಿಕೊಂಡು ಕಳಂಕ ತರುವ ಕೆಲಸ ಮಾಡಬಾರದು ಎಂದರು. ರಾಮಕೃಷ್ಣ ಹೈದರಾಬಾದ್ ಟ್ರಸ್ಟ್ ಸದಸ್ಯ ಮಾತನಾಡಿ, ನಾವೆಲ್ಲ ಭಕ್ತರು, ಒಟ್ಟಾಗಿ ಸೇವೆ ಮಾಡುತ್ತಿದ್ದೇವೆ. ಈಶ್ವರಿ ಅವರು ಇಲ್ಲದ್ದನ್ನು ಸೃಷ್ಟಿಸಿ, ಅಹಿಂಸಾ ಮಾರ್ಗದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಸಾಧನೆ ಮಾಡುವ ಬದಲು ನಲ್ಲಗೊಂಡ ಆಶ್ರಮ ಕಬಳಿಸುವ ತಂತ್ರ ಮಾಡುತ್ತಿರುವುದು ಸರಿಯಲ್ಲ, ಅವರು ನಡವಳಿಕೆ ಬದಲಿಸಿಕೊಳ್ಳಬೇಕು. ಅಮ್ಮನವರು ಹೇಳಿದ ಮಾರ್ಗದಲ್ಲಿ ನಡೆಯಲು ಮನವಿ ಮಾಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ಸಣ್ಣೂರ, ಆಶ್ರಮದ ವಿರುದ್ದ ಆರೋಪಗಳು ಸುಳ್ಳು, ಸರ್ಕಾರ ಮತ್ತು ಅಧಿಕಾರಿಗಳು ಇಲ್ಲಿಯೇ ಇದ್ದು, ಎಲ್ಲವನ್ನೂ ಮಾಡಿದ್ದಾರೆ ಎಂದರು.

ಕಿಷ್ಟಪ್ಪ ಪುರುಷೋತ್ತಮ ಮಾತನಾಡಿ, ಈಶ್ವರಿ ಅವರು ಭಕ್ತರಲ್ಲಿ ಒಡಕು ಮೂಡಿಸುವಂತೆ ಹೇಳಿಕೆ ತುಂಬುತ್ತಿದ್ದಾರೆ ಅವರು ಮಾತು ಸತ್ಯಕ್ಕೆ ದೂರವಾಗೆದೆ. ಟ್ರಸ್ಟ್ ಎಲ್ಲಾ ಸದಸ್ಯರು ಸಭೆ ಸೇರಿ ಮುಂದೆ ಏನು ಕ್ರಮವಹಿಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಶಂಕರಭೂಪಾಲ ಪಾಟೀಲ ಕಾನಾಗಡ್ಡ, ಜಗಮೋಹನರೆಡ್ಡಿ, ಜ್ಞಾನೇಶ್ವರ ಶಹಾಪೂರ, ಹಣಮಂತು ಮಡ್ಡಿ, ಶ್ರೀನಿವಾಸರೆಡ್ಡಿ ಶಕಲಾಸಪಲ್ಲಿ, ನರೇಂದ್ರ ಇಟಕಾಲ್, ರವಿ ಇಟಕಾಲ, ರಾಮಕೃಷ್ಣ, ಎಂ.ಪಿ ಜ್ಞಾನೇಶ್ವರ, ನಾಗಮ್ಮ ವಸ್ತಾದ್, ಶಶಿಕಲಮ್ಮ, ಅಮೀನಾ ಬೇಗಂ, ಗೋಪಾಲ ಗೌಡ ಚಂಡಿಕಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!