ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನ | ಪತ್ರಕರ್ತರು ಗಾಂಧಿ, ಅಂಬೇಡ್ಕರ ಅವರ ಆಶಯಗಳನ್ನು ಅರಿತು ಅವರಂತೆ ಕಾರ್ಯನಿರ್ವಹಿಸಿ

ಬೀದರ: ಪತ್ರಕರ್ತರು ಸದಾಕಾಲ ಜನಪರವಾಗಿ, ಸಮಾಜದ ಪರವಾಗಿರಬೇಕು. ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹೇಳಿದರು.

ಶನಿವಾರ ಬೀದರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ಏಪ್ರಿಲ್ 11ರಂದು ಆರಂಭವಾದ 40 ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು, ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಸಂತಷದಿಂದ ಉದ್ಘಾಟಿಸಿದ್ದೇನೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಪತ್ರಕರ್ತರು ಸಮಾಜ ತಿದ್ದುವ, ಜನತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು. ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು ಎಂದು ಒತ್ತಿ ಹೇಳಿದರು. ನಮ್ಮ ಸಮಾಜದಲ್ಲಿ ಅನೇಕ ಜಾತಿಗಳು, ಧರ್ಮ, ಭಾಷೆಗಳಿವೆ. ಹಲವು ಸಂಸ್ಕೃತಿ ಇದೆ. ಇಂತಹ ಸಮಾಜದಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ಅರಿತು ಎಲ್ಲರೂ ಒಪ್ಪುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದರು ಎಂದು ತಿಳಿಸಿದ ಮುಖ್ಯಮಂತ್ರಿಗಳು, ನಮ್ಮ ಸಂವಿಧಾನದ ಆಶಯಗಳು ಸಮಾಜದಲ್ಲಿ ಜಾರಿಯಾಗುತ್ತಿದೆಯಾ ಎಂದು ನೋಡುವ, ತಿಳಿಯುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.

ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ ಅವರು ಸಹ ಪತ್ರಕರ್ತರಾಗಿದ್ದರು. ಸ್ವಾತಂತ್ರ‍್ಯ ಪೂರ್ವದಲ್ಲಿ ಸ್ವಾತಂತ್ರ‍್ಯ ಪಡೆಯುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಅದಕ್ಕಾಗಿ ಗಾಂಧೀಜಿ, ಅಂಬೇಡ್ಕರ ಅವರು ಪತ್ರಿಕೆಯನ್ನು ಹೊರಡಿಸಿ ದಮನಿತರ ಧ್ವನಿಯಾಗಿ ಕೆಲಸ ಮಾಡಿದರು. ಇಂದಿನ ಪತ್ರಕರ್ತರು ಗಾಂಧೀಜಿಯವರ, ಅಂಬೇಡ್ಕರ ಅವರ ಆಶಯಗಳನ್ನು ಅರಿತು ಅವರಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ನಾವು ಚರಿತ್ರೆಯುದ್ದಕ್ಕೂ ಅನೇಕ ಸಾಧು-ಸಂತರ ಮಾತುಗಳನ್ನು ಕೇಳುತ್ತ ಬಂದಿದ್ದೇವೆ. ಅವರ ಮಾತಿನಂತೆ ನಾವು ನಡೆಯಬೇಕು. ನಮ್ಮ ಸಮಾಜದಲ್ಲಿ ಅನೇಕ ನೂನ್ಯತೆಗಳಿದ್ದು, ಅವುಗಳನ್ನು ಹೋಗಲಾಡಿಸಿ ಸಮಸಮಾಜ ಕಟ್ಟುವ ಕಾರ್ಯ ಮಾಡಬೇಕಿದೆ ಎಂದು ಸಲಹೆ ನೀಡಿದರು. ನಮ್ಮಲ್ಲಿ ಜಾತಿ ವ್ಯವಸ್ಥೆ ಈಗಲೂ ಇದೆ, ಸಮಸಮಾಜ ನಿರ್ಮಾಣಕ್ಕೆ ನಮ್ಮ ಅನೇಕ ಶರಣರು ಶ್ರಮಿಸಿದ್ದರು. ಸಮಸಮಾಜ ನಿರ್ಮಾಣ ಆಗಲೇಬೇಕು. ಇಲ್ಲದಿದ್ದರೆ ಅಸಮಾನತೆಯು ಹಾಗೆಯೇ ಉಳಿಯುತ್ತದೆ. ಸೂಕ್ಷ್ಮ ವಿಷಯಗಳನ್ನು ಪತ್ರಕರ್ತರು ಅರಿಯಬೇಕು ಎಂದರು. ನಮ್ಮ ಮಕ್ಕಳಿಗೆ ವೈಚಾರಿಕತೆ, ವೈಜ್ಞಾನಿಕತೆ ಇಲ್ಲದ ಶಿಕ್ಷಣ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರು ಕರ್ಮ ಸಿದ್ದಾಂತವನ್ನು ತಳ್ಳಿ ಹಾಕಿದರು. ಬಸವಣ್ಣನವರು ತಿಳಿಸಿದ ಸಮಾಜಮುಖಿ ವಿಚಾರಗಳು ಪಸರಿಸಬೇಕು. ನಾವೆಲ್ಲರೂ ಮಾನವರಾಗಿ ಬದುಕಬೇಕು. ಮಾನವೀಯತೆ ಇರಬೇಕು. ಮಾನವೀಯತೆ ಇದ್ದರೆ ಶೋಷಣೆಗೆ ಅವಕಾಶವಿರಲ್ಲ ಎಂದು ತಿಳಿದು ಸಮಾಜ ಒಡೆಯುವ ಪಟ್ಟಭದ್ರರನ್ನು ಹತ್ತಿಕ್ಕುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.

ಬಹುತೇಕ ಪತ್ರಕರ್ತರು ಕಾರ್ಪೋರೇಟ ವಲಯದ ಹಿಡಿತದಲ್ಲಿದ್ದು, ಮುಕ್ತವಾಗಿ ಬರೆಯಲು ಅವಕಾಶವಿಲ್ಲದಂತಹ ಒತ್ತಡ ಎದುರಿಸುವ ಪರಿಸ್ಥಿತಿಯೂ ಇದೆ. ಪತ್ರಕರ್ತರಿಗೆ ಬರೆಯಲು ಮುಕ್ತ ಅವಕಾಶವಿರಬೇಕು. ವಸ್ತುನಿಷ್ಠವಾದ ವಿಷಯ, ಸತ್ಯವನ್ನು ಜನರ ಮುಂದೆ ಇಡುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು. ಯಾವುದೇ ವಿಷಯ ಇರಲಿ ಶೋಧಿಸಿ, ದಾಖಲೆ ಕೇಳಿ ಬರೆಯಬೇಕು. ಊಹಾ ಮಾಧ್ಯಮ ಅಪಾಯಕಾರಿ. ಕ್ಷುಲ್ಲಕ ವಿಚಾರಗಳನ್ನು ಮುನ್ನೆಲೆಗೆ ತರಬಾರದು ಎಂದು ಅವರು ಸಲಹೆ ಮಾಡಿದರು.

12ನೇ ಶತಮಾನದಿಂದಲೇ ಸಮಾಜ ಬದಲಾವಣೆ ಕಾರ್ಯ ಆಗುತ್ತಿದೆ. ಆದರೆ, ಸಮಾಜ ಇದುವರೆಗೆ ಏಕೆ ಬದಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡದೆ ಇದ್ದರೆ ಮತ್ತೆ ನಾವು ಹಳೆಯ ವ್ಯವಸ್ಥೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅರಣ್ಯ. ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಈಶ್ವರ ಬಿ. ಖಂಡ್ರೆ ಮಾತನಾಡಿ, ಸ್ವಾತಂತ್ರ‍್ಯ ಪೂರ್ವದಿಂದ ಹಿಡಿದು ಸಮಾಜದ ಪ್ರಗತಿಯಲ್ಲಿ ಮಾಧ್ಯಮಗಳ ಪಾತ್ರ ಬಹಳ ಮಹತ್ವದಾಗಿದೆ. ಮಹಾತ್ಮ ಗಾಂಧಿಜೀಯವರು, ಡಾ.ಬಿ.ಆರ್. ಅಂಬೇಡ್ಕರ್, ತಿಲಕರು ಸೇರಿದಂತೆ ಹಲವಾರು ಜನರು ಮಾಧ್ಯಮಗಳ ಮೂಲಕ ಜನರಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹಚ್ಚಿದ್ದರು.

ಮಾಧ್ಯಮ ವ್ಯಾಪಾರ ಅಲ್ಲ ಅದೊಂದು ಪವಿತ್ರ ವೃತ್ತಿ, ಬೀದರ ಜಿಲ್ಲೆ ಸೂಫಿ ಸಂತ ಶರಣರ ನಾಡಾಗಿದ್ದು ಇದು ಸರ್ವ ಜನಾಂಗದ ಶಾಂತೀಯ ತೋಟವಾಗಿದೆ. ಇಲ್ಲಿ 40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.ಸಾಮಾಜಿಕ ನ್ಯಾಯದ ಹರಿಕಾರ, ಬಡವರ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿರುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವ ಜಯಂತಿ ದಿನದಂತೆ ಪ್ರಮಾಣ ವಚನ ಸ್ವೀಕರಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಯಾಗಿ ಸಮ ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವ ಅವರು ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ 1 ಕೋಟಿ ಬಡ ಜನರಿಗೆ ಅನುಕೂಲವಾಗುವಂತೆ ಮಾಡುವುದರ ಜೊತೆಗೆ ದೇಶದಲ್ಲಿಯೆ ರಾಜ್ಯದ ತಲಾ ಆದಾಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬೀದರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 8 ಸಾವಿರ ಕೋಟಿ ರೂ ಹಣವನ್ನು ಬೀದರ ಜಿಲ್ಲೆಗೆ ಸನ್ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಹೇಳಿದರು.

ಜಗತ್ತಿನ ಮೊದಲ ಸಂಸತ್ತು ನೂತನ ಅನುಭವ ಮಂಟಪ ಜಗತ್ತಿಗೆ ಮಾದರಿಯಾದ ಆಧ್ಯಾತ್ಮ ಕೇಂದ್ರದಲ್ಲಿ 770 ಅಮರಗಳಂಗಳವರ ಶರಣರ ವಚನಗಳನ್ನು ಪ್ರತಿ ಕಂಬಗಳ ಮೇಲೆ ಕೆತ್ತಲಾಗುತ್ತಿದೆ. ಈಗಾಗಲೇ ನೂತನ ಅನುಭವ ಮಂಟಪದ ಕೆಲಸ ಶೇ. 75 ಪ್ರತಿಶತ ಮುಗಿದಿದೆ, ಇದರ ಕೆಲಸ ಮುಗಿದ ನಂತರ ಸಿಎಂ ಅವರೆ ಉದ್ಘಾಟನೆ ಮಾಡಲಿದ್ದಾರೆ. ಪತ್ರಕರ್ತರಿಗಾಗಿ ಸರಕಾರದಿಂದ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಮಾಧ್ಯಮದವರಿಗೆ 5 ಲಕ್ಷ ರೂ ವರೆಗೆ ಮಾಧ್ಯಮ ಸಂಜೀವಿನಿ ಯೋಜನೆ. ಪತ್ರಕರ್ತರಿಗೆ ಈ ಹಿಂದೆ ನೀಡಲಾಗುತ್ತಿದ್ದ 3 ಸಾವಿರದಿಂದ 15 ಸಾವಿರಕ್ಕೆ ಮಾಶಾಸನ ಹೆಚ್ಚಿಸಲಾಗಿದೆ. ಪತ್ರಕರ್ತರಿಗೆ ಉಚಿತ ಬಸ್ ಪಾಸಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಪತ್ರಕರ್ತರ ಬಗ್ಗೆ ಎಷ್ಟು ಹೇಳಿದರು ಕಡಿಮೆ ಇದೆ. ಈಗಿನ ಕಾಲದಲ್ಲಿ ಮಾಧ್ಯಮಗಳು ಎಷ್ಟು ವೇಗವಾಗಿ ಕೆಲಸ ಮಾಡುತ್ತಿವೆ ಎಂದರೆ ಕ್ಷಣ- ಕ್ಷಣದ ಸುದ್ದಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿವೆ. ಅಂಬೇಡ್ಕರ್ ಅವರು ಸಹ ದೇಶದ ಸ್ವಾತಂತ್ರ‍್ಯ ಸಮಯದಲ್ಲಿ ಪತ್ರಿಕೆಯನ್ನು ತೆಗೆದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಸಿಎಂ ಬಗ್ಗೆ ಎಷ್ಟು ಹೇಳಿದರು ಕಡಿಮೆ, ಡಿ.ದೇವರಾಜ ಅರಸು ಅವರ ದಾಖಲೆಯನ್ನು ಬ್ರೇಕ್ ಮಾಡುವ ಮೂಲಕ ದೇಶದಲ್ಲಿ ಒಳ್ಳೆಯ ಆಡಳಿತವನ್ನು ನೀಡುತ್ತಿದ್ದಾರೆ. ಅವರು ಬೀದರ ಜಿಲ್ಲೆಗೆ ಕಾರ್ಪೊರೇಷನ್ ಮಾಡಿ ಅದರ ಅಭಿವೃದ್ದಿಗೆ 200 ಕೋಟಿ ರೂ. ಹಣವನ್ನು ಕೊಟ್ಟಿದ್ದಾರೆ. ಜಿಲ್ಲೆಯ 9 ಟಿಎಂಸಿ ಮತ್ತು ಸಿಎಂಸಿ ಮೇಲ್ದರ್ಜೆಗೇಸಲಾಗಿದೆ ಎಂದರು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ್ ಅವರು ಮಾತನಾಡಿ, ಸಂಘ ಬೆಳೆದಿದ್ದು ಬಂದ ಹಾದಿಯ ಕುರಿತು ವಿವರಿಸಿದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಆರಂಭಿಸಿದೆ. ಕಳೆದ ಐದು ವರ್ಷಗಳಲ್ಲಿ 1.1 ಕೋಟಿ ರೂ. ಉಳಿಕೆ ಮಾಡಿ ಠೇವಣಿ ಇಡಲಾಗಿದೆ. ಪತ್ರಕರ್ತರು ಅಪಘಾತಕ್ಕೀಡಾದಾಗ, ತೊಂದರೆಯಲ್ಲಿದ್ದಾಗ ನೆರವಾಗಲು ಆಪತ್‌ಬಾಂಧವ ಯೋಜನೆ ಆರಂಭಿಸಲಾಗಿದೆ. ಪತ್ರಕರ್ತರಿಗೆ ಸರ್ಕಾರ ಎಲ್ಲಾ ರೀತಿಯಿಂದ ನೆರವಾಗುತ್ತಿದೆ. ವಿಶೇಷವಾಗಿ ಸಿಎಂ ಅವರ ಕಾಳಜಿಯಿಂದ ಎಲ್ಲ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿದೆ ಎಂದವರು ಸುಮಾರು 5500 ಗ್ರಾಮೀಣ ಪತ್ರಕರ್ತರು ಮೊದಲ ಹಂತದಲ್ಲಿ ಈ ಯೋಜನೆಯ ಲಾಭ ಪಡೆಯಲು ನೋಂದಾಯಿಸಿದ್ದು, ಅರ್ಹರಿಗೆ ಈ ಯೋಜನೆಯ ಲಾಭ ಸಕಾಲಕ್ಕೆ ದೊರೆಯಬೇಕೆಂದರು.

ಆಯವ್ಯಯದಲ್ಲಿ ಮಾಧ್ಯಮ ಸಂಜೀವಿನಿ (ಮಾಧ್ಯಮ ಆರೋಗ್ಯ ಸಂಜೀವಿನಿ) ಯೋಜನೆ ಘೋಷಿಸಿದ್ದು, ಸಮರ್ಪಕ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು. ಗಡಿಭಾಗದ ಪತ್ರಿಕೆಗಳಿಗೆ ಗಡಿ ಜಾಹೀರಾತು ನೀಡುವ ವ್ಯವಸ್ಥೆ ಮುಂದುವರೆಸಬೇಕು. ಹೊಸ ಜಾಹೀರಾತು ನೀತಿಯಲ್ಲಿ ತಿದ್ದುಪಡಿ ತಂದು ಈ ಜಾಹೀರಾತು ನೀಡುವ ವ್ಯವಸ್ಥೆ ಜಾರಿ ತರಲು ಕೋರಿದರು. ಪತ್ರಕರ್ತರು ತಮ್ಮ ಬರಹಗಳ ಮೂಲಕ ಗುರುತಿಸಿಕೊಳ್ಳಬೇಕು. ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿಕೊ ಳ್ಳಬೇಕು. ಕೆಲವು ಬ್ಲಾಕ್ಮೇಲ್ ಹಾಗೂ ಕ್ರಿಮಿನಲ್ ಮನಸ್ಥಿತಿ ಪತ್ರಕರ್ತರಿಂದ ನೈಜ ಪತ್ರಕರ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ನಮ್ಮಿಂದಲೇ ಆಗಬೇಕು ಎಂದು ಪತ್ರಕರ್ತರಿಗೆ ಕಿವಿ ಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೊದಲ ಅಧ್ಯಕ್ಷರಾಗಿದ್ದ ಡಿ.ವಿ.ಗುಂಡಪ್ಪ ಜಯಂತಿ ಆಚರಣೆಗೆ ಮುಖ್ಯಮಂತ್ರಿಗಳು ಘೋಷಿಸಬೇಕು. ಸರ್ಕಾರ ಪತ್ರಕರ್ತರಿಗೆ ಎಲ್ಲ ರೀತಿಯಿಂದ ನೆರವಾಗುತ್ತಿದೆ. ಮಾಹಿತಿ ಹಕ್ಕು ಆಯೋಗಕ್ಕೆ ಈವರೆಗೆ ಐದು ಜನ ಪತ್ರಕರ್ತರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ನೇಮಿಸಿದೆ ಎಂದು ಅವರು ಹೇಳಿದರು.

ನೆನಪಿನ ಕೈಪಿಡಿ ಬಿಡುಗಡೆ: ಸಮ್ಮೇಳನದ ನಿಮಿತ್ತ ಪ್ರಕಟಿಸಿದ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತರಾದ ಶಶಿಕಾಂತ ಶೆಂಬೆಳ್ಳಿ ಹಾಗೂ ಶ್ರೀಕಾಂತ ಬಿರಾದಾರ ಸಂಪಾದಿಸಿದ ‘ಶರಣ ಸೂಫಿ ಸಿರಿ’ ವಿಶೇಷ ಸಂಚಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ದ-ನ್ಯೂವ್ ಇಂಡಿಯನ್ ಎಕ್ಸಪ್ರೇಸ್ ಸ್ಥಾನಿಕ ಸಂಸ್ಥಾಪಕ ರಾಮು ಪಾಟೀಲ ಅವರಿಗೆ ಲೋಕ ನಾಯಕ ದಿವಂಗತ ಭೀಮಣ್ಣ ಖಂಡ್ರೆ ಅವರ ದತ್ತಿ ನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ 40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಸಹಕರಿಸಿದ ಮಹನೀಯರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಮುಖ್ಯಮಂತ್ರಿಗಳು ಛಾಯಾಚಿತ್ರ ಹಾಗೂ ವ್ಯಂಗ ಚಿತ್ರ ಪ್ರದರ್ಶನ ಸೇರಿದಂತೆ ಇತರೆ ಮಳಿಗೆಗಳ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಾರಕೂಡ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಬೀದರ ಲೋಕಸಭಾ ಸಂಸದ ಸಾಗರ ಈಶ್ವರ ಖಂಡ್ರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಶಿವಕುಮಾರ, ಮಾಜಿ ಸಚಿವ ರಾಜಶೇಖರ ಬಿ. ಪಾಟೀಲ, ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ಗಣ್ಯರಾದ ಸರ್ದಾರ ಬಲಬೀರ್ ಸಿಂಗ್, ಗುರುನಾಥ ಕೊಳ್ಳೂರ, ಹಿರಿಯ ಸಂಪಾದಕ ವಿಶ್ವೇಶ್ವರ ಭಟ್, ರಾಜ್ಯ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಮುಖಂಡರಾದ ಸೋಮಣ್ಣ ಬೇವಿನಮರದ, ಬಸವರಾಜ ಜಾಬಶೆಟ್ಟಿ, ಮೇಯರ್ ಗೌಸುದ್ದೀನ್, ಮಲ್ಲಿಕಾರ್ಜುನ ಬಿರಾದಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದೇವಪ್ಪ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಎಸ್ಪಿ ಪ್ರದೀಪ ಗುಂಟಿ, ಪಾಲಿಕೆ ಆಯುಕ್ತ ಮುಕುಲ್ ಜೈನ್, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪತ್ರಕರ್ತರು, ಸಂಪಾದಕರು, ದೃಶ್ಯ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!