ಸಂಭ್ರಮ ನವರಾತ್ರಿ ಉತ್ಸವ ಆಚರಣೆ | ದೇವಿಗೆ ವಿಶೇಷ ಅಲಂಕಾರ | ಮಹಿಳಾ ಸಂಘದಿಂದ ಸೇವೆ
ಗುರುಮಠಕಲ್: ನವರಾತ್ರಿ ಹಬ್ಬದ ನಿಮಿತ್ತವಾಗಿ ತಾಲೂಕಿನ ಕಾಳಬೆಳಗುಂದಿ ಗ್ರಾಮದ ಶ್ರೀ ಭದ್ರಕಾಳಿ ಬನದೇಶ್ವರ ಮಹಿಳಾ ಸಂಘದ ವತಿಯಿಂದ ಶ್ರೀ ಭದ್ರಕಾಳಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವದಿಂದ ನವರಾತ್ರಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಭದ್ರಕಾಳಿ ತಾಯಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಗ್ರಾಮದ ಮಹಿಳೆಯರು ಹಾಗೂ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು, ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು.
ನವರಾತ್ರಿ ಹಬ್ಬದ ಅಂಗವಾಗಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು. ಶ್ರೀ ಭದ್ರಕಾಳಿ ಬನದೇಶ್ವರ ಮಹಿಳಾ ಸಂಘದ ಪ್ರಮುಖರು, ಸದಸ್ಯರು ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಭಾಗವಹಿಸಿ ಧಾರ್ಮಿಕ ಸಂಪ್ರದಾಯ ಹಾಗೂ ಭಕ್ತಿಯ ಮಹತ್ವವನ್ನು ಸಾರಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಭಕ್ತಿಭಾವದಿಂದ ಕಾರ್ಯಕ್ರಮ ನೆರವೇರಿತು.
