ಗುರುಮಠಕಲ್ ಪ್ರಜಾಸೌಧ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಅಡಿಗಲ್ಲು | ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಮೊಳಗಿತು ಜಯಘೋಷ


ವಿಧಾನ ಸಭೆ ಚುನಾವಣೆ ಮುಗಿದು ಎರಡು ವರ್ಷಗಳ ಬಳಿಕ ಗುರುಮಠಕಲ್ ನಲ್ಲಿ ರಾಜಕೀಯ ಸನ್ನಿವೇಶ ಒಂದು ಏರ್ಪಟ್ಟಿತು. ಅಭಿವೃದ್ಧಿ ಕಾರ್ಯಕ್ರಮದ ವೇದಿಕೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಪ್ರದರ್ಶನವೇ ನಡೆದಂತೆ ಭಾಸವಾಯಿತು.

ಯಾದಗಿರಿ (ಗುರುಮಠಕಲ್): ಸಾರ್ವಜನಿಕರಿಗೆ ಅನುಕೂಲವಾಗಲು ಪ್ರಜಾಸೌಧ ಕಾಮಗಾರಿಗೆ ಮೊದಲ ಹಂತದಲ್ಲಿ 8.60 ಕೋಟಿ ಬಿಡುಗಡೆಯಾಗಿದ್ದು, ಇರದ ಅಡಿಗಲ್ಲು ನೆರವೇರಿಸಿರುವುದು ಸಂತಸ ತಂದಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಹಳೆ ಪೊಲೀಸ ವಸತಿ ಸಮುಚ್ಛಯ ಆವರಣದಲ್ಲಿ ನೂತನ ಪ್ರಜಾಸೌಧ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು. ಒಟ್ಟು 8.60 ಕೋಟಿ ವೆಚ್ಚದಲ್ಲಿ ಕೆಕೆಆರ್‌ಡಿಬಿ,  ಕಂದಾಯ ಇಲಾಖೆ ಅನುದಾನ ಭರಿಸಲಿದೆ. ೨ ವರ್ಷ ಹಿಂದೆಯೇ ಕಾಮಗಾರಿ ಆರಂಭವಾಗಬೇಕಿತ್ತು. ಗುರುಮಠಕಲ್ ಪ್ರಜಾಸೌಧ ನಿರ್ಮಾಣಕ್ಕೆ 2023ರಲ್ಲಿ ಸಚಿವ ದರ್ಶನಾಪುರ ಹೆಸರು ಕೊಟ್ಟಿದ್ದರು ಎಂದು ಅಭಿನಂದನೆ ತಿಳಿಸಿದರು.ಶಾಸಕರಾಗಿದ್ದ ನಾಗನಗೌಡ ಕನಸು ಪ್ರಜಾಸೌಧಕ್ಕೆ ನಿರ್ಮಾಣ ಮಾಡುವುದಾಗಿತ್ತು, ಸೂಕ್ತ ಜಾಗ ಇರಲಿಲ್ಲ, ಹಿಂದೆ ಹಣ ಸಾಲಲ್ಲ ಎಂದು ವಾಪಸ್ ಕಳಿಸಲಾಗಿತ್ತು. ಇದರ ಹಿಂದೆ ಈ ಹಿಂದಿನ ಜಿಲ್ಲಾಧಿಕಾರಿ ಸುಶೀಲಾ ಬಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಮರಿಸಿದರು. ಪೋಲಿಸ್ ವಸತಿ ಗೃಹ ಕೆಡವಿ ಈ ಸ್ಥಳ ನೀಡಿರುವುದಕ್ಕೆ ಪೊಲೀಸರಿಗೂ ಧನ್ಯವಾದ ತಿಳಿಸಿದರು.

ಶೀಘ್ರವೇ ಕಾಮಗಾರಿ ಆರಂಭಿಸಿ, ಇನ್ನು ಹೆಚ್ಚಿನ ಅನುದಾನ ತರಲು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಪಡುವುದಾಗಿ ಹೇಳಿದ ಅವರು, ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಲು ಹೇಳಿದರು.ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡುತ್ತ,  ಗುರುಮಠಕಲ್ ಕ್ಷೇತ್ರ ಸಾಮಾನ್ಯವಲ್ಲ. ಖರ್ಗೆ ಅವರು ಇಲ್ಲಿಂದ ಆರಿಸಿ ಹೋಗಿ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ ಎಂದು ರಾಜಕೀಯ ಮಾತನಾಡಲು ಹೋದರು. ಇದರಿಂದ ಕಾರ್ಯಕರ್ತರ ಚೀರಾಟ ಜೋರಾಯಿತು. ವೇದಿಕೆ ಕುರ್ಚಿ ಬಿಟ್ಟು ಎದ್ದು ಶಾಸಕ ಶರಣಗೌಡ ಕಂದಕೂರ, ಚಿಂಚನಸೂರ ಅವರ ವಯಸ್ಸಿಗೆ ಅಗೌರವ ತೋರದಂತೆ ಸಮಾಧಾನಪಡಿಸಿದರು. ಸರ್ಕಾರಿ ಕಾರ್ಯಕ್ರಮ ಇದೆ. ಹಿರಿಯರು ಮಾತನಾಡಲಿ ಕೇಳುವಂತೆ ಜನರಿಗೆ ಮನವಿ ಮಾಡಿದರು.

ಗುರುಮಠಕಲ್ ಕ್ಷೇತ್ರಕ್ಕೆ ಅನೇಕ ಯೋಜನೆಗಳು ಬಂದಿವೆ. ಖರ್ಗೆ ಅವರ ನಿರ್ದೇಶನ ಮೇರೆಗೆ ಅನೇಕ ಕೆಲಸವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದಾರೆ ಇನ್ನು ಅಭಿವೃದ್ಧಿ ಕಾರ್ಯಗಳಿದ್ದರೆ ಪಡೆಯಬಹುದು ಎಂದರು.

ಚಿಂಚನಸೂರ ಕ್ಲೈಮಾಕ್ಸ್ ಎಂಟ್ರಿ…! : ಬಾಬುರಾವ ಚಿಂಚನಸೂರ ವೇದಿಕೆಗೆ ಬರುತ್ತಿದ್ದಂತೆ ಬೆಂಬಲಿಗರು, ಜೈಕಾರ ಕೂಗಿದರು. ಪ್ರತಿಯಾಗಿ ಜೆಡಿಎಸ್ ಕಾರ್ಯಕರ್ತರು ಜೈಕಾರ ಕೂಗಿದರು. ವೇದಿಕೆಗೆ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಸಾಹಸಪಟ್ಟರು.

ನಿಮ್ಮ ಸಹಕಾರ ಇರಲಿ…! :  ಕಾರ್ಯಕ್ರಮದಲ್ಲಿ ನಮ್ಮದೇ ಸರ್ಕಾರ ಇದೆ ಎಂದು ಬಾಬುರಾವ ಚಿಂಚನಸೂರ ಹೇಳಿದ್ದಕ್ಕೆ ಶಾಸಕ ಕಂದಕೂರ ಅವರು, ಸದ್ಯ ಇಲ್ಲಿ 30 ಬೆಡ್ ಆಸ್ಪತ್ರೆಯಿಂದ 50 ಆಗಿದೆ. ಜನರ ಆರೋಗ್ಯ ಸಮಸ್ಯೆ ನಿವಾರಿಸಲು 100 ಬೆಡ್ ಆಸ್ಪತ್ರೆ ಬೇಕು, ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲು ಕೋರಿದರು. ಲೋಕೋಪಯೋಗಿ ಸಚಿವರಿಗೆ ಗ್ರಾಮೀಣ ಭಾಗಕ್ಕೆ ಹೋಗಲು ಬೈಪಾಸ್ ರಸ್ತೆ ನಿರ್ಮಾಣಕ್ಕೆ 160 ಕೋಟಿ ಬೇಕು ಎಂದು ಮನವಿ ಮಾಡಿರುವೆ ಇದಕ್ಕೆ ಸಹಕಾರ ನೀಡಲು ಹೇಳಿದರು.

ಚುನಾವಣೆ 15 ದಿನ ಇರುವಾಗ ರಾಜಕೀಯ ಮಾಡೋಣ ಎಂದು ಕಂದಕೂರ : 15 ದಿನ ಚುನಾವಣೆ ಇದ್ದಾಗ ರಾಜಕೀಯ ಮಾಡೋಣ, ಹಿರಿಯರಿದ್ದೀರಿ. ಸರ್ಕಾರಿ ಕಾರ್ಯಕ್ರಮಯಿದೆ. ಕಳೆದ 5 ವರ್ಷ ಮುಗಿತು, ಸಮರ್ಪಕ ಅನುದಾನ ಬರಲಿಲ್ಲ. ಅಭಿವೃದ್ಧಿ ವಿಷಯದಲ್ಲಿ ಸಹಕಾರ ಇರಲಿ. ಪ್ರತಿ ಕಾರ್ಯಕ್ರಮಕ್ಕೂ ಬನ್ನಿ ಎಂದರು.

5 ವರ್ಷಕ್ಕೆ ಚುನಾವಣೆ ಬರುತ್ತೆ, ಅಭಿವೃದ್ಧಿ ವಿಷಯದಲ್ಲಿ ಸಹಕಾರ ಬೇಕು. ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಶಾಸಕನಾಗಿ ನನ್ನ ಮೇಲಿದೆ ಎಂದರು. ಆರಿಸಿ ಹೋದವರು ಜನರಿಗೆ ಸುಲಭವಾಗಿ ಸಿಗಬೇಕು. ನನ್ನ ಗುರಿ ಅಭಿವೃದ್ಧಿ ಅಭಿವೃದ್ಧಿ ಅಭಿವೃದ್ಧಿ ಎಂದು ಕಂದಕೂರ ಉಚ್ಚರಿಸಿದರು.

ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ವಿಜಯ ಭಂಡಾರಿ, ಗಿರೀಶ್, ಭಾರತಿ ದಂಡೋತಿ ಇದ್ದರು. ತಹಸೀಲ್ದಾರ್ ಶಾಂತಗೌಡ ಬಿರಾದಾರ ಸ್ವಾಗತಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!