ಅತಿ ಹೆಚ್ಚುದಿನ ಮೋದಿ ಪ್ರಧಾನಿ | ಹಲವು ಸಾಧನೆಗಳಿಂದ ದೇಶದ ಅಭಿವೃದ್ದಿ | ನಮೋಶಿ ಅಭಿಪ್ರಾಯ

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಲ್ಲಿ ವಿಶ್ವಾಸಾರ್ಹ ಆಡಳಿತ, ಜನಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು. ಶುಕ್ರವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ  ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಸಾಧನೆಗಳ ಕುರಿತು ಮಾಧ್ಯಮ ಸಂವಾದ ನಡೆಸಿ ಅವರು ಮಾತನಾಡಿದರು. ಮೋದಿ ಸರ್ಕಾರದ 12 ವರ್ಷಗಳ ಆಡಳಿತವನ್ನು ನಾಲ್ಕು ಪ್ರಮುಖ ಅಂಶಗಳಾದ ವಿಶ್ವಾಸ, ಸುಶಾಸನ, ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ನಾಯಕತ್ವ ಎಂಬ ನೆಲೆಗಟ್ಟಿನಲ್ಲಿ ವಿವರಿಸಿದ ಅವರು, ಕರ್ನಾಟಕ ಸೇರಿದಂತೆ ದೇಶದ ಜನರು ನಿರಂತರವಾಗಿ ಮೋದಿ ಸರ್ಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಹೇಳಿದರು.

2014ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 17 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದು, 2019ರಲ್ಲಿ 25 ಸ್ಥಾನಗಳ ಐತಿಹಾಸಿಕ ಜಯ ಸಾಧಿಸಿತು. 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 19 ಸ್ಥಾನಗಳನ್ನು ಗೆದ್ದು ಶೇಕಡಾ 51.66 ಮತ ಹಂಚಿಕೆ ಪಡೆದಿರುವುದು ಜನರ ವಿಶ್ವಾಸದ ಪ್ರತೀಕ ಎಂದರು.

ಜನಧನ್ ಖಾತೆಗಳು, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಮುದ್ರಾ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್, ಪಿಎಂ ಸ್ವನಿಧಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಕೋಟ್ಯಂತರ ಜನರಿಗೆ ನೇರ ಲಾಭ ತಲುಪಿಸಲಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ, ಬೆಂಗಳೂರು ಮೆಟ್ರೋ ವಿಸ್ತರಣೆ, ರೈಲ್ವೆ ವಿದ್ಯುದೀಕರಣ, ಕೈಗಾರಿಕಾ ಕಾರಿಡಾರ್ ಹಾಗೂ ಕಲಬುರಗಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಮುಂತಾದ ಯೋಜನೆಗಳು ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿವೆ ಎಂದು ತಿಳಿಸಿದರು.

ವಿದೇಶಾಂಗ ನೀತಿಯಲ್ಲಿ ಭಾರತವು ಜಿ20 ಅಧ್ಯಕ್ಷತೆ, ಕ್ವಾಡ್ ಸಹಭಾಗಿತ್ವ, ವ್ಯಾಕ್ಸಿನ್ ಮೈತ್ರಿ, ಅಂತರರಾಷ್ಟ್ರೀಯ ಸೌರ ಒಕ್ಕೂಟ, ಚಂದ್ರಯಾನ್-3 ಯಶಸ್ಸು ಹಾಗೂ ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

ಮೋದಿ ಸರ್ಕಾರದ 12 ವರ್ಷಗಳು ಭಾರತವನ್ನು ಆತ್ಮನಿರ್ಭರ, ಅಭಿವೃದ್ಧಿ ಹೊಂದಿದ ಹಾಗೂ ವಿಶ್ವ ವೇದಿಕೆಯಲ್ಲಿ ಪ್ರಭಾವಿ ರಾಷ್ಟ್ರವನ್ನಾಗಿ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಮೈಲಿಗಲ್ಲಾಗಿವೆ ಎಂದು ಶಶಿಲ್ ನಮೋಶಿ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಮಾಜಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಗೌಡ ಮಾಗನೂರ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಮುಖಂಡರಾದ ದೇವೇಂದ್ರನಾಥ ನಾದ್, ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಾ, ಶಿವರಾಜ ದೇಶಮುಖ, ಮುಖಂಡರಾದ ಸಿದ್ರಾಮರೆಡ್ಡಿ ಬಲಕಲ್, ವೆಂಕಟರೆಡ್ಡಿ ಅಬ್ಬೆತುಮಕೂರು, ಲಿಂಗಪ್ಪ ಹತ್ತಿಮನಿ ಸೇರಿದಂತೆ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!