ಜಿಲ್ಲೆಯಲ್ಲಿನ ರಸ್ತೆಗಳ ಅಭಿವೃದ್ಧಿ | ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು
ಯಾದಗಿರಿ: ಸಿಂದಗಿ-ಕೊಡಂಗಲ್ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣ,ಭೀಗುಡಿ-ವಿಭೂತಿಹಳ್ಳಿ ಬೈಪಾಸ್ ರಸ್ತೆ ನಿರ್ಮಾಣ ಸೇರಿದಂತೆ ಜಿಲ್ಲೆಯಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಿಗೆ ಅಂಡರ್ ಪಾಸ್ ನಿರ್ಮಿಸುವ ಕುರಿತಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಇಂದು ಚರ್ಚೆ ನಡೆಸಿದರು.
ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ,ಸಿಂದಗಿ-ಕೊಡಂಗಲ್ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣದ ಬಗ್ಗೆ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಬೇಕು.ಅದರಂತೆ 367 ಕೋ.ರೂ ವೆಚ್ಚದ ಭೀಗುಡಿ-ವಿಭೂತಿಹಳ್ಳಿ, 17 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಹತ್ತಿಗುಡೂರ್ ಕ್ರಾಸ್ ರಿಂದ ತಿಂಥಣಿ ರಸ್ತೆ ಅಗಲೀಕರಣ ಹಾಗೂ ಜಿಲ್ಲೆಯಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಿಗೆ ಅಂಡರ್ ಪಾಸ್ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವಂತೆ ರಾಯಚೂರು ಸಂಸದ ಜಿ.ಕುಮಾರನಾಯಕ ಅವರಿಗೆ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ರಾಯಚೂರು ಸಂಸದ ಶ್ರೀ ಜಿ.ಕುಮಾರನಾಯಕ ಅವರು, ರಾಷ್ಟ್ರೀಯ ಹೆದ್ದಾರಿಯಡಿ 5 ರಿಂದ 7 ಅಂಡರ್ ಪಾಸ್ ನಿರ್ಮಿಸುವ ಬಗ್ಗೆ ಬೇಡಿಕೆ ಇದ್ದು ಜಿಲ್ಲಾಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿರುವ ಹತ್ತಿಗುಡೂರ್-ತಿಂಥಣಿ ಬ್ರೀಡ್ಜ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣದ ಬಗ್ಗೆ ಕೇಂದ್ರ ಸರ್ಕಾರದ ಹಾಗೂ ಕೇಂದ್ರ ಹೆದ್ದಾರಿ ಸಚಿವರ ಗಮನಕ್ಕೆ ತರಲಾಗುವುದು.
ಸಿಂದಗಿ-ಕೊಡಂಗಲ್ ರಸ್ತೆ ನೆನೆಗುದಿಗೆ ಬಿದ್ದಿದೆ.ಟೆಂಡರ್ ಕರೆಯುವ ಪ್ರಕ್ರಿಯೆ ಬಾಕಿಯಿದೆ.ಕ್ರಿಯಾಯೋಜನೆ ಸಿದ್ಧಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು,ಇದೇ ವರ್ಷ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಭೀಗುಡಿ ಬೈಪಾಸ್ ರಸ್ತೆ ಕುರಿತು ತ್ವರಿತ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.ನಿರಂತರ ನಿಗಾ ಇಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪ್ರಗತಿಯಲ್ಲಿದೆ.ಪ್ರತ್ಯೇಕವಾಗಿ ಈ ಕುರಿತು ಪರಿಶೀಲಿಸುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್ , ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಿಲಿಂದ್ ಕುಮಾರ್, ಸೇರಿದಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
