ಅರ್ಥಪೂರ್ಣವಾಗಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ | ವಿಭಿನ್ನತೆ ಹೊಂದಿದ ಭಾರತಕ್ಕೆ ಅಪಸ್ವರವಿಲ್ಲದ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ | ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಮತ

ಯಾದಗಿರಿ: ವಿವಿಧ ಭಾಷೆ, ಧರ್ಮ, ಸಮಾಜ, ಆಚಾರ, ವಿಚಾರ ಭೌಗೋಳಿಕ ವಿಭಿನ್ನತೆ ಹೊಂದಿರುವ ಭಾರತಕ್ಕೆ ಯಾರೊಬ್ಬರೂ ಅಪಸ್ವರ ಎತ್ತದಂತಹ ಶ್ರೇಷ್ಠ ಸಂವಿಧಾನವನ್ನು, ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವಾರ್ಪನೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ವೈವಿಧ್ಯಮಯ ದೇಶವಾಗಿದೆ. ವಿವಿಧ ಧರ್ಮ, ಭಾಷೆ, ಆಚಾರ, ವಿಚಾರಗಳನ್ನು ಹೊಂದಿರುವಂತಹ ಹಲವು ಸಮಾಜ, ಜನಾಂಗಗಳ ದೇಶವಾಗಿದೆ. ವಿವಿಧ ರೀತಿಯ ಭೌಗೋಳಿಕತೆ ಯನ್ನು ಸಹ ಹೊಂದಿರುವಂತಹ ಇಂತಹ ರಾಷ್ಟ್ರಕ್ಕೆ ಉತ್ಕೃಷ್ಟ ವಾದ ಶ್ರೇಷ್ಠ ಸಂವಿಧಾನವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದಾರೆ. ಅದರಲ್ಲಿಯೂ ಯಾರೊಬ್ಬರ ಅಪಸ್ವರ ವಿಲ್ಲದಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿರುವುದು ನಮ್ಮ ದೇಶದ ಅಖಂಡತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂವಿಧಾನದ ಮೂಲಕ ಶೋಷಿತ ಸಮಾಜಕ್ಕೆ ನ್ಯಾಯ ಒದಗಿಸಿದ ದೇವಸ್ವರೂಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಾಗಿದ್ದಾರೆ. ರಾಜಕೀಯವಾಗಿ, ಶೈಕ್ಷಣಿಕವಾಗಿ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ. ಅಂತಹ ಮೇರು ವ್ಯಕ್ತಿತ್ವದ ಡಾ. ಬಾಬಾ ಸಾಹೇಬ್ ರ ತತ್ವ ಆದರ್ಶಗಳನ್ನು ಸ್ವಲ್ಪವಾದರೂ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನುಕರಣೆ ಮಾಡುವ ಮೂಲಕ ಸಂಘಟಿತರಾಗಿ, ಸಮಾನ ದೃಷ್ಟಿಕೋನವನ್ನು ಬೆಳೆಸಿಕೊಂಡು ಸಮಾಜ,ದೇಶದ ಒಳಿತಿಗೆ  ಶ್ರಮಿಸುವಂತೆ ಅವರು ಸಲಹೆ ನೀಡಿದರು.

ದೇಶದಲ್ಲಿ ಸಮಾನತೆ ಇದ್ದಾಗ ಮಾತ್ರ ದೇಶವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ. ಹಲವು ಅವಮಾನ, ಅಪಮಾನ, ಕಷ್ಟಗಳನ್ನು ಸಹಿಸಿ ದೇಶದ ಐಕ್ಯತೆಗೆ ಶ್ರಮಿಸಿದ ಡಾ. ಬಾಬಾ ಸಾಹೇಬರ ಕನಸು ನನಸಾಗಿಸಲು ಎಲ್ಲರೂ ಒಗ್ಗಟ್ಟರಾಗಿ,  ಸಮಾನರಾಗಿ ಬಾಳುವಂತೆ ಅವರು ಸಲಹೆ ನೀಡಿದರು.

ಸಮಾಜದಲ್ಲಿ ನಡೆಯುವಂತಹ ಕೆಟ್ಟ ಚಟುವಟಿಕೆಗಳನ್ನು ನಿಯಂತ್ರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಗುಡಿ ಗುಂಡಾರ ಗಳಿಗೆ ತಮ್ಮ ಹಣ ವ್ಯಯ ಮಾಡುವ ಬದಲು ಮಕ್ಕಳ ಶಿಕ್ಷಣಕ್ಕೆ ವ್ಯಯಿಸಿ ಅವರನ್ನೇ ಆಸ್ತಿರನ್ನಾಗಿಸಬೇಕು.

ಶೈಕ್ಷಣಿಕ ಕ್ರಾಂತಿ ಮೂಲಕ ಸಮಾನತೆ ತರುವ ಜೊತೆಗೆ ತಮ್ಮ ಮಕ್ಕಳನ್ನು ಸುಶಿಕ್ಷಿತ ರನ್ನಾಗಿಸುವ ಮೂಲಕ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಕೆಲಸಮಾಡಗಬೇಕು. ಇದಾದಾಗ ಮಾತ್ರ ದೇಶದ ಸಮಗ್ರತೆ ಹಾಗೂ ಅಭಿವೃದ್ಧಿಗೆ ನೆರವಾಗಲಿದೆ ಎಂದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ 371 (ಜೆ ) ರನ್ವಯ ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಪ್ರಯತ್ನದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವಕಾಶ ದೊರೆತಿದ್ದು, ತಮ್ಮ ಯಾವುದೇ ರೀತಿಯ ಕಷ್ಟ ಕಾರ್ಪನ್ಯಗಳಿದ್ದರೂ ಅವುಗಳನ್ನು ಮೀರಿ ಶಿಕ್ಷಣವಂತ ರಾಗಬೇಕು, ಉದ್ಯೋಗದ ಲಾಭ ಪಡೆಯಬೇಕು. ಸಮಾಜದಲ್ಲಿ ಸಮಾನತೆ ತರಬೇಕು. ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕಲಬುರ್ಗಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸಹಪ್ರಾಧ್ಯಾಪಕರಾದ ಡಾ. ಜಯದೇವಿ ಗಾಯಕವಾಡ ಅವರು ಶತ-ಶತಮಾನಗಳ ನೋವು ಅನುಭವಿಸಿ ಶೋಷಿತ ವರ್ಗಗಳಿಗೆ ಸಂವಿಧಾನದ ಮೂಲಕ ನ್ಯಾಯ ಒದಗಿಸುವ ಕಾರ್ಯವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರು ಮಾಡಿದ್ದಾರೆ. ಶ್ರಮಿಕರು, ಕಾರ್ಮಿಕರು ,ಮಹಿಳೆಯರು,ರೈತರು ಹಾಗೂ ಬಡ ಜನರಿಗೆ ನ್ಯಾಯ ಒದಗಿಸಿದ್ದಾರೆ.ಶೋಷಿ ತರ ಹಕ್ಕುಗಳಿಗಾಗಿ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ ಸಮಾನತೆ, ಸ್ವಾತಂತ್ರ್ಯವನ್ನು ದೇಶಕ್ಕೆ ತಿಳಿ ಹೇಳಿದ್ದಾರೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರು, ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಸ್ತಾವನೆಯಲ್ಲಿಯೇ ವಿಶ್ವದ ಇತರೆ ರಾಷ್ಟ್ರಗಳಿಗಿಂತಲೂ ಮೀಗಿಲಾದ ಧ್ಯೇಯವನ್ನು ವಿವರಿಸಿದ್ದಾರೆ. ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ವಿವಿಧ ಹಕ್ಕುಗಳು, ಜವಾಬ್ದಾರಿ, ನಾಗರಿಕರಿಗೆ ಮನವರಿಕೆ ಮಾಡಿದ್ದಾರೆ.ಈ ದೇಶದ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಭಾವನೆಯ ಸೃಷ್ಟಿಕರ್ತರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಾಗಿದ್ದಾರೆ. ಅಂತಹ ಮೇಧಾವಿಯ ತತ್ವ ಆದರ್ಶಗಳನ್ನು ಪಾಲಿಸಿ ಈ ಜಿಲ್ಲೆಯಲ್ಲಿಯೂ ಮಕ್ಕಳನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರಬೇಕು. ಈ ಮೂಲಕ ಶಿಸ್ತು ಮತ್ತು ಸುಸ್ಥಿರ, ದೌರ್ಜನ್ಯ ಮುಕ್ತ ಸಮಾಜ ರೂಪಿಸಲು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ  ಸಂವಿಧಾನದ ಪೀಠಿಕೆ ಓದಲಾಯಿತು. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ, ಸಮಾಜದ ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು. ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ್ ಮಾಲಿ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಕ್ ಶಂಕರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಸಹಾಯಕ  ಆಯುಕ್ತ ಹಂಪಣ್ಣ ಸಜ್ಜನ್, ಜಯಂತೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಅನ್ವರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ, ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಮರೆಯಪ್ಪ ಚಟ್ಟರ್ಕರ್, ಮಲ್ಲಪ್ಪ ಗೋಗಿ, ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಎಸ್. ಎಸ್. ಅವರು ಸ್ವಾಗತಿಸಿದರು. ಜ್ಯೋತಿಲತಾ ತಡಬೀಡಿ ಕಾರ್ಯಕ್ರಮ ನಿರ್ವಹಿಸಿದರು. ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ವಂದಿಸಿದರು. ಶರಣಬಸಪ್ಪ ವಟಾರ್ ಪ್ರಾರ್ಥಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!