ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನದಿಂದ 2 ದಿನ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ | ಎಸ್.ಬಿ.ಪಾಟೀಲ ಮಾಹಿತಿ

ಯಾದಗಿರಿ: ಇದೇ ತಿಂಗಳು 12 ಮತ್ತು 13 ರಂದು ಎರಡು ದಿನಗಳ ಕಾಲ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಪ್ರತಿಷ್ಠಾನವು ಯಾದಗಿರಿಯ ಶ್ರೀ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಆಯೋಜಿಸಿದೆ ಎಂದು ಪ್ರತಿಷ್ಠಾನದ ನಿರ್ದೇಶಕ ಹಾಗೂ ಹಿರಿಯ ನ್ಯಾಯವಾದಿ ಎಸ್.ಬಿ.ಪಾಟೀಲ ಹೇಳಿದರು. ಪತ್ರಿಕಾ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠಾನವು ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಯಾದಗಿರಿ ಜಿಲ್ಲೆಯೊಂದಿಗೆ ಭಾವನಾತ್ಮಕ ಒಡನಾಟ ಹೊಂದಿರುವ ಡಾ.ಶಿವರಾಜ ಪಾಟೀಲ ಅವರು ನಮ್ಮ ಜಿಲ್ಲೆಯ ಜನರಿಗೆ ಅನುಕೂಲವಾಗಲು ಶಿಬಿರ ಆಯೋಜಿಸಲು ಸೂಚಿಸಿದ್ದು,ಆ ಹಿನ್ನಲೆಯಲ್ಲಿ ಈ ಬೃಹತ್ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.

ಪ್ರತಿಷ್ಠಾನದ ಸಂಚಾಲಕ ಡಾ.ಸಿದ್ಧರಾಜರೆಡ್ಡಿ ಮಾತನಾಡಿ, ಯಾದಗಿರಿ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಶಿಬಿರ ನಡೆಯಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಅಂಧತ್ವ ನಿಯಂತ್ರಣ ವಿಭಾಗದ ಸಹಕಾರದೊಂದಿಗೆ, ಬೆಂಗಳೂರು,ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧ ಭಾಗಗಳ ಸುಮಾರು 30 ಕ್ಕೂ ಹೆಚ್ಚು ಪ್ರತಿಷ್ಠಿತ ತಜ್ಞ ವೈದ್ಯರು ನೇತ್ರ ತಪಾಸಣೆ ಮಾಡಿ,ಅಗತ್ಯವಿರುವವರಿಗೆ ಸ್ಥಳದಲ್ಲಿಯೇ ಶಸ್ತ್ರಚಿಕಿತ್ಸೆ ‌ನೆರವೇರಿಸಲಿದ್ದಾರೆ ಎಂದರು.

ಶಸ್ತ್ರಚಿಕಿತ್ಸೆ ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಹಾಗೂ ಅವರನ್ನು ನೋಡಿಕೊಳ್ಳಲು ಬರುವ ವ್ಯಕ್ತಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿಷ್ಠಾನದ ವತಿಯಿಂದ ಉಚಿತವಾಗಿ ಗುಣಮಟ್ಟದ ಕನ್ನಡಕಗಳನ್ನು ಸಹ ವಿತರಿಸಲಾಗುವುದು ಎಂದರು.

ಯಾದಗಿರಿ ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಯ ವ್ಯಕ್ತಿಗಳು ಸಹ ಈ ಶಿಬಿರದ ಲಾಭ ಪಡೆಯಬಹುದಾಗಿ ದ್ದು, ಆಧಾರ್ ಕಾರ್ಡ್ ನ ಜೊತೆ ಬಂದು ತಪಾಸಣೆಗೆ ಒಳಗಾಗಬಹುದು. 13 ರಂದು ನಡೆಯುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ, ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ,ಶರಣಗೌಡ ಕಂದಕೂರ,ಜಿಲ್ಲಾಧಿಕಾರಿ,ಪ್ರತಿಷ್ಠಾನದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಎಂ.ರೆಡ್ಡಿ ಯವರು, ಕಾರ್ಯದರ್ಶಿ ಪ್ರೊ.ಚನ್ನಾರೆಡ್ಡಿ ಪಾಟೀಲ,ಯಿಮ್ಸ್ ನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.

ಶ್ರೀ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ಸಿ ಪಾಟೀಲ ಮಾತನಾಡಿ, ಎಷ್ಟೋ ಜನ ದೃಷ್ಟಿ ಕಳೆದುಕೊಂಡು ಜಗತ್ತಿನ ಸೌಂದರ್ಯವನ್ನು ನೋಡುವ ಭಾಗ್ಯವನ್ನೇ ಕಳೆದುಕೊಂಡಿದ್ದು ಅಂತಹವರಿಗೆ ಈ ಶಿಬಿರ ವರದಾನವಾಗಲಿದ್ದು, ಬಡವರು- ಶ್ರೀಮಂತರು ಎಂಬ ಬೇಧವಿಲ್ಲದೇ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಶಿಬಿರ ಪ್ರಾರಂಭವಾಗಲಿದ್ದು,ನೋಂದಣಿ ಮಾಡಿಸಿ ಚಿಕಿತ್ಸೆ ಪಡೆಯಬಹುದು ಎಂದು ಮಾಹಿತಿ ನೀಡಿದರು. ನೋಂದಣಿಗೆ ಸಂಪರ್ಕಿಸಲು : ಉಮೇಶ್ ಮೋ .9538356367, ಮಾಳಪ್ಪ ಮೋ .9980295242, ಮೀನಾಕ್ಷಿ ಮೋ.9035777391, ಸಿದ್ದರಾಜ ರೆಡ್ಡಿ ಮೋ.9886065902  ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಹೇಳಿದರು.

Spread the love

Leave a Reply

Your email address will not be published. Required fields are marked *

error: Content is protected !!