ವಿಕಲಚೇತನರ ಸೌಲಭ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ | ವಿಕಲಚೇತನರಿಗಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆ ಗಳಡಿ ಹಾಗೂ ಇಲಾಖಾವಾರು ಶೇ.5ರಷ್ಟು ಅನುದಾನ ಸದ್ಬಳಕೆ ಮಾಡಿ, ಸೌಲಭ್ಯ ಕಲ್ಪಿಸಿ | ವಿಕಲಚೇತನರ ಹಕ್ಕುಗಳ ಅಧಿನಿ ಯಮ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಸೂಚನೆ

ಯಾದಗಿರಿ; ಕಡು ಬಡವರು ಹಾಗೂ ತೀರ ಕಷ್ಟದಲ್ಲಿರುವಂತಹ ವಿಕಲಚೇತನರಿಗೆ ಸರ್ಕಾರ ಜಾರಿಗೊಳಿಸಿದ ಯೋಜನೆಗಳಡಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರಿಗೆ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ವಿಕಲಚೇತನರ ಹಕ್ಕುಗಳ ಅಧಿನಿಯಮದಡಿಯ ರಾಜ್ಯ ಆಯುಕ್ತ ಶ್ರೀ ದಾಸ್ ಸೂರ್ಯವಂಶಿ  ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಕಲಚೇತನರಿಗಾಗಿ ಮೀಸಲಾದ ಶೇ. ಐದರಷ್ಟು ಅನುದಾನ ಬಳಕೆ, ಮತ್ತು ವಿವಿಧ ಯೋಜನೆಗಳಡಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳ ಮೂಲಕ ವಿಕಲಚೇತನ ಓರ್ವ ವ್ಯಕ್ತಿಗೂ ನೆರವಾದರೂ ಜೀವನ ಸಾರ್ಥಕವಾಗಲಿದೆ. ಈ ದಿಸೆಯಲ್ಲಿ ಸರ್ಕಾರವು ಶಿಕ್ಷಣ, ಉದ್ಯೋಗ ಹಾಗೂ ಅನುದಾನದಲ್ಲಿ ನ್ಯಾಯ ಬದ್ಧವಾಗಿ ಮೀಸಲಿಟ್ಟ ಅನುದಾನದಲ್ಲಿ ವಿಕಲಚೇತನರಿಗೆ ಅವಶ್ಯಕ ಸೌಲಭ್ಯಗಳನ್ನು ಕಡ್ಡಾಯವಾಗಿ ತಲುಪಿಸುವಂತೆ ಅವರು ಸೂಚನೆ ನೀಡಿದರು.

ವಿಕಲಚೇತನರ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಶಾಲಾ ವ್ಯಾಪ್ತಿಯಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ, ಕಿವುಡರಿಗೆ ಸೈನ್ ಭಾಷೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಶಿಬಿರ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಕುರಿತು ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸಲ್ಲಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ, ಭಾಷೆ ಕಲಿಸಿದಲ್ಲಿ ವಿಶ್ವದ ಯಾವ ಭಾಗದಲ್ಲಾದರೂ ಅವರು ಜೀವಿಸಬಹುದು. ಈ ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಗಮನ ನೀಡಬೇಕು. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ವಿಕಲಚೇತನರನ್ನು ಶಸ್ತ್ರಚಿಕಿತ್ಸೆ ಮೂಲಕ ಶೇಕಡಾ 80 ರಷ್ಟು ಸರಿಪಡಿಸಲು ಅವಕಾಶವಿರುವುದರಿಂದ, ಇದಕ್ಕೆ ವಿಶೇಷ ಗಮನ ನೀಡಬೇಕು. ಅವಶ್ಯಕ ಸಂದರ್ಭದಲ್ಲಿ ಸರ್ವಶಿಕ್ಷಣ ಅಭಿಯಾನದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಉದ್ಯೋಗ ಮತ್ತು ವಿನಿಮಯ ಕಚೇರಿ ಮೂಲಕ ಸೂಕ್ತ ಉದ್ಯೋಗಾವಕಾಶ ಕಲ್ಪಿಸಬೇಕು. ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ, ವಿವಿಧ ನಿಗಮಗಳ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಕಲಚೇತನರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಬೇಕು.ಶೇ5 ರಷ್ಟು ಅನುದಾನ ತಪ್ಪದೇ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಜ್ಯ ಸರ್ಕಾರ ಶಿಕ್ಷಣ, ಉದ್ಯೋಗ ಹಾಗೂ ಇಲಾಖೆಯ ಅನುದಾನದಲ್ಲಿ ಶೇಕಡಾ ಐದರಷ್ಟು ಮೀಸಲು ಅವಕಾಶ ಕಲ್ಪಿಸಿದೆ. ವಿಕಲಚೇತನರಿಗಾಗಿ ರಾಜ್ಯ ಸರ್ಕಾರ ಕಲ್ಪಿಸಿದ ಸೌಲಭ್ಯಗಳು ದೇಶದ ಯಾವ ರಾಜ್ಯಗಳಲ್ಲಿಯೂ ಕಲ್ಪಿಸಿಲ್ಲ. ವಿಕಲಚೇತನರ ಆರೈಕೆದಾರರಿಗೆ ಪಿಂಚಣಿ ಸಹ ಒದಗಿಸುತ್ತಿದೆ. ನವೋದಯ, ಜವಾಹರ ಮಾದರಿ ವಸತಿ ಶಾಲೆಗಳಲ್ಲಿ ವಿಕಲಚೇತನರಿಗೆ ಶೇ. ಹತ್ತರಷ್ಟು ಮೀಸಲು ಹಾಗೂ ಕೇಂದ್ರ ಸರ್ಕಾರದಿಂದ ಉದ್ಯೋಗದಲ್ಲಿ ಶೇ4ರಷ್ಟು ಮೀಸಲು ಅವಕಾಶ ಕಲ್ಪಿಸಿದ್ದು, ಅಧಿಕಾರಿಗಳು ಅರ್ಹರಿಗೆ ಸೌಲಭ್ಯ ಕಲ್ಪಿಸಿ, ಅವರಿಗೆ ನೆರವಾಗಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ವ್ಯಾಪ್ತಿಯಲ್ಲಿ ವಿಕಲಚೇತನರ ಸ್ನೇಹಿ ಸೌಲಭ್ಯಗಳನ್ನು ವಿಶೇಷವಾಗಿ ರ್ಯಾಂಪ್, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ವಿಕಲಚೇತನರು ಸೌಲಭ್ಯ ಪಡೆಯುವವರೆಗೆ ಕಾಯದೆ ಅವರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಸೌಲಭ್ಯಗಳನ್ನು ಕಲ್ಪಿಸಲು ಅವರು ಸೂಚನೆ ನೀಡಿದರು.

ವಿಕಲಚೇತನರಿಗೆ ಸಕಾಲಕ್ಕೆ ಮಾಹೆವಾರು ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಿಶೇಷ ನ್ಯಾಯಾಧೀಶರ ಮೂಲಕ ಅವರು ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶವಿದೆ.ವಿವಿಧ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಪ್ರತಿ ಇಲಾಖೆ ವ್ಯಾಪ್ತಿಯ ವಿಕಲಚೇತನರಿಗೆ ಇರುವ ಶೇ.5ರ ಅನುದಾನ ಸಮರ್ಪಕವಾಗಿ ಬಳಸಬೇಕು. ಬ್ರೈಲ್ ಭಾಷಾ ,ಸೈನ್ ಭಾಷೆ ತರಬೇತಿ ಹಮ್ಮಿಕೊಳ್ಳಬೇಕು. ವಿಕಲಚೇತನರ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಸೂಚಿಸಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರು(10568),( ಪುರುಷರು-16855), ಲಿಂಗತ್ವ ಅಲ್ಪಸಂಖ್ಯಾತರು (4) ಒಳಗೊಂ ಡು ಒಟ್ಟು 27,427 ವಿಕಲಚೇತನರು ಇದ್ದಾರೆ.2016ರ ವಿಕಲಚೇತನರ ಹಕ್ಕುಗಳ ಕಾಯ್ದೆ ಯಡಿ 21ವಿಧಧ ಅಂಗವಿಕಲತೆಗೆ ಸೌಲಭ್ಯ ಕಲ್ಪಿಸಲಾ ಗುತ್ತಿದೆ.23,272 ವಿಕಲತೆ ಪ್ರಮಾಣ ಪತ್ರ ನೀಡಲಾಗಿದೆ. 31,334 ಅಂಗವಿಕಲ ಪೋಷಣಾ ಪಿಂಚಣಿ ನೀಡಲಾಗುತ್ತಿದ್ದು, ಆರೋಗ್ಯ ವಿಮೆ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!