ಚಿಂದಿ ಆಯಲು ಹೋದವರು ಶವವಾದರು | ತನಿಖೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಮನವಿ
ಯಾದಗಿರಿ: ಗುರುಮಠಕಲ್‌ನ ಇಂದಿರಾ ನಗರದ ಬುಡ್ಗ ಜಂಗಮರ ಒಬ್ಬ ಮಹಿಳೆ ಹಾಗೂ ಅಪ್ರಾಪ್ತ ಬಾಲಕಿಯ ಶವಗಳು ಕೆರೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಮುಖಂಡರು, ಅಲೆಮಾರಿ ಬುಡಗ ಜಂಗಮ ಸಮುದಾಯದ ಶ್ಯಾಮಮ್ಮ ಗಂ. ಹುಸೇನಪ್ಪ ಸಿರಿಗಿರಿ(೨೦), ಸಾಯಮ್ಮ ತಂ. ಭೀಮಪ್ಪ ಸಿರಿಗಿರಿ (೧೫) ಜಿಲ್ಲೆಯ ಗುರುಮಠಕಲ್‌ನ ಇಂದಿರಾನಗರ ನಿವಾಸಿಗಳಾಗಿದ್ದು, ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಮನೆಯಿಂದ ಚಿಂದಿ ಆಯಲು ಹೋಗಿ ಫೆಬ್ರವರಿ 12 ರಂದು ಗುರುಮಠಕಲ್ ಮತಕ್ಷೇತ್ರದ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇಬ್ಬರ ಶವಗಳು ಸಿಕ್ಕಿದೆ.
ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಈಗಾಗಲೇ ಸೈದಾಪೂರ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದ್ದು, ಆದ ಕಾರಣ ಇಬ್ಬರು ದಲಿತ ಸಮಾಜದ ಬಾಲಕಿಯರ ಸಾವಿನ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ಇವರ ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ, ಇವರ ಸಾವಿಗೆ ಕಾರಣರಾದವರ ಮೇಲೆ ನಿಷ್ಪಕ್ಷಪಾತವಾಗಿ ತ್ವರಿತ ಗತಿಯಲ್ಲಿ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಲಾಯಿತು.
ಸಂಘಟನೆ ತಾಲೂಕು ಸಂಚಾಲಕ ಅಶೋಕ.ಎಸ್, ರಿಯಾಜ್ ಅಹ್ಮದ್, ನಾಗರಾಜ್, ಬುಡ್ಗ ಜಂಗಮ ಮುಖಂಡ ಶಂಕರ್ ಶಾಸ್ತ್ರಿ, ಎಸ್. ವೈ ಮಾರುತಿ, ಸಂತೋಷ ಶಾಸ್ತ್ರಿ, ಹಣಮಂತ, ಭೀಮಾಶಂಕರ ಯರಗೋಳ, ಯಮುನಪ್ಪ, ಹಣಮಂತ, ಮಲ್ಲೇಶ ಇತರರು ಇದ್ದರು.
