ಕರವೇ ಜಿಲ್ಲಾ ಘಟಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ | ಓದಿಗೆ ಬೆಲೆಕೊಟ್ಟು ಸಾಧಕರಾಗಲು ಎಸ್ ಪಿ ಪೃಥ್ವಿಕ್ ಶಂಕರ ಅಭಿಮತ
ಯಾದಗಿರಿ : ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಿಯು ಪರೀಕ್ಷೆಯಲ್ಲಿ ಅತ್ಯುಧಿಕ ಅಂಕಗಳನ್ನು ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಿಮ್ಮ ಕಣ್ಣು ಎದುರಿಗೆ ಡಾ. ನಿವೇದಿತಾ ಭಾವಿಮನಿ ಇದ್ದಾರೆ. ಅವರ ಜೀವನದಲ್ಲಿ ಸಮಯ ಹಾಳು ಮಾಡದೇ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿ ಈಗ ಯುಪಿಎಸ್‌ಸಿ ಪಾಸು ಮಾಡಿದ್ದಾರೆ. ಇಷ್ಟರಲ್ಲಿಯೇ ಅವರು ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಗೆ ಹೋಗುತ್ತಾರೆ, ಅವರೇ ನಿಮಗೆ ಪ್ರೇರಣೆ ಎಂದು ಮಕ್ಕಳನ್ನು ಪ್ರೇರೆಸಿದರು. ಹೆಚ್ಚಿನ ಅಂಕಗಳನ್ನು ಪಡೆದ ಮಕ್ಕಳನ್ನು ಗುರುತಿಸಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಅವರ ನೇತೃತ್ವದ ತಂಡ ಉತ್ತಮ ಕೆಲಸ ಮಾಡಿದೆ. ಇದು ಇತರೇ ಮಕ್ಕಳಿಗೆ ಮತ್ತಷ್ಟು ಓದಲು ಹುಮ್ಮಸ್ಸು ನೀಡುತ್ತದೆ. ಮಕ್ಕಳು ಮೊಬೈಲ್ ಚಟದಿಂದ ದೂರವಿರಬೇಕು. ವಿದ್ಯಾರ್ಥಿ ಜೀವನ ಬಂಗಾರದಂತಹ ಜೀವನ, ಅದಕ್ಕೇ ಅದನ್ನು ಹಾಳು ಮಾಡಿಕೊಳ್ಳದೇ ಕೇವಲ ಈ ಸಮಯ ಶಿಕ್ಷಣಕ್ಕೆ ಮೀಸಲಿಡಬೇಕೆಂದರು.
ಯುಪಿಎಸ್‌ಸಿ ಸಾಧಕಿ ಡಾ.ನಿವೇದಿತಾ ಭಾವಿಮನಿ ಮಾತನಾಡಿ, ಜೀವನದಲ್ಲಿ ಸಾಧನೆಗೆ ಶಿಕ್ಷಣ ಒಂದೇ ಮೈಲುಗಲ್ಲು. ಕಾರಣ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿದರೆ ನಿಗದಿತ ಗುರಿ ತಾನಾಗಿಯೇ ಮುಟ್ಟಲು ಸಾಧ್ಯವೆಂದರು. ಶಿಕ್ಷಣ ಒಂದಿದ್ದರೇ ಜೀವನದಲ್ಲಿ ಎಷ್ಟೇ ಕಠಿಣ ಸವಾಲುಗಳು ಎದುರಾದರೂ ನಿಭಾಯಿಸುವ ಶಕ್ತಿ ಬರುತ್ತದೆ. ಗಿರಿಜಿಲ್ಲೆ ಹಿಂದುಳಿದಿದೆ ಎಂಬ ಹಣೆಪಟ್ಟಿ ಅಳಿಸಬೇಕೆಂದರೇ ವಿದ್ಯಾರ್ಥಿಗಳು ಛಲತೊಟ್ಟು ಅಭ್ಯಾಸ ಮಾಡಬೇಕೆಂದ ಅವರು, ತಾವು ಪಟ್ಟ ಕಠಿಣ ಶ್ರಮದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಸಮಾಜಕ್ಕೆ ಪರಿಚಯಿಸುವ ಕೆಲಸ ಸಂಘಟನೆ ಮಾಡುತ್ತದೆ. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಸದಾ ಹೋರಾಟ ಮಾಡುತ್ತಿರುವ ಕರವೇ, ಇಂತಹ ಹೊಸ, ಹೊಸ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸದಾ ಚಟುವಟಿಕೆಯಲ್ಲಿ ಇದೆ ಎಂದರು.
ಸಾನಿಧ್ಯ ವಹಿಸಿದ್ದ ಹಲಕಟ್ಟಿಯ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಮುನಿಂದ್ರ ಶಿವಾಚಾರ್ಯ ಸ್ವಾಮಿಗಳು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಬಗ್ಗೆ ನಿರಂತರವಾಗಿ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿಕೊಟ್ಟ ಜಿಲ್ಲಾ ಕರವೇ ಸಂಘಟನೆ, ಇಂದು ಇಂತಹ ವಿನೂತನ ಮತ್ತು ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು. ಅಧ್ಯಕ್ಷ ಟಿ.ಎನ್.ಭೀಮುನಾಯಕ ನೇತೃತ್ವದ ಕರವೇ ತಂಡದ ಕಾರ್ಯ ಮೆಚ್ಚುವಂತಹದ್ದು ಎಂದರು.
ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ವಕೀಲರ ಸಂಘದ ಅಧ್ಯಕ್ಷ ರವೀಂದ್ರ ಎಸ್. ಪಾಟೀಲ್, ಅಗ್ರಣೆಯ ಬ್ಯಾಂಕಿನ ವ್ಯವಸ್ಥಾಪಕ ಸುನೀಲ್ ಬತ್ತಿ, ಗುತ್ತಿಗೆದಾರ ಮೋಹನ ರಾಠೋಡ್, ಉದ್ಯಮಿ ಜೀತೇಶ ಮೋರ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ೩೫ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ ಪಾಟೀಲ್ ಜೈಗ್ರಾಮ,ರವರು ಕಾರ್ಯಕ್ರಮದ ವಂದನಾರಪಣೆಯನ್ನು ಮಲ್ಲು ಮಾಳಿಕೇರಿಯವರು ನೆರವೆರಿಸಿದ್ದರು, ಕರವೇ ಮುಖಂಡರಾದ ಅಂಬ್ರೇಶ ಹತ್ತಿಮನಿ, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಮನಿ, ವಿಶ್ವರಾಜ ಪಾಟೀಲ್ ಹೊನಗೇರಾ, ಅಬ್ದುಲ್ ಚಿಗಾನೂರ, ವೆಂಕಟೇಶನಾಯಕ ಬೈರಿಮಡ್ಡಿ, ಶರಣಬಸಪ್ಪ ಎಲ್ಲೇರಿ, ಚನ್ನಬಸಪ್ಪ ತಳವಾರ, ಅಂಬರೀಶ ಕಟ್ಟಿಮನಿ, ಶರಣಪ್ಪ ದಳಪತಿ, ದೀಲಿಪಕುಮಾರ ಸೈದಾಪುರ ಶರಣು ಸಾಹುಕಾರ ವಡ್ನಳ್ಳಿ, ಅಶೋಕ ನಾಯಕ, ಹಣಮಂತ ತೇಕರಾಳ, ವಿಜಯ ರಾಠೋಡ, ಮಹೇಶ ಠಾಣಗುಂದಿ, ಸುರೇಶ ಬೆಳಗುಂದಿ, ಮೌನೇಶ ಮಾಧ್ವಾರ, ಹಣಮೇಗೌಡ ಶಾಖಾಪೂರ, ಸಾಬು ನೀಲಹಳ್ಳಿ, ರಮೇಶ.ಡಿ.ನಾಯಕ, ಹಾಗೂ ಇನ್ನೂ ಅನೇಕರು ಭಾಗಿಯಾಗಿದ್ದರು.
