ಯಾದಗಿರಿ : ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 36-ಶೋರಾಪೂರ, 37-ಶಹಾಪೂರ, 38-ಯಾದಗಿರಿ ಹಾಗೂ 39-ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು 2024ರ ಅಕ್ಟೋಬರ್ 29 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿ, ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ಕಾರ್ಯಾಲಯ ಯಾದಗಿರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಸೀಲ್ದಾರರ ಕಾರ್ಯಾಲಯ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಅಲ್ಲದೇ ಕರಡು ಮತದಾರರ ಪಟ್ಟಿಯನ್ನು (http://ceokarnataka.kar.nic.in) ಹಾಗೂ ಜಿಲ್ಲೆಯ (yadgir.nic.in) ಅಂತರ್ಜಾಲದಲ್ಲಿಯು ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದ Facebook ನ (dcydg123@gmail.com) ನಲ್ಲಿಯೂ ಸಹ ಪರಿಶೀಲಿಸಬಹುದಾಗಿದೆ.
ಕರಡು ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಪ್ರಕಟವಾದ ಬಗ್ಗೆ ಪರಿಶೀಲಿಸಿ ಕೊಳ್ಳಬೇಕು ಒಂದು ವೇಳೆ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ಯುವಕರು, ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ, ಮೃತ ಹೊಂದಿದ್ದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಮೂನೆ-7 ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8 ರಲ್ಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿ.ಎಲ್.ಓ) ರವರಿಗೆ 2024ರ ಅಕ್ಟೋಬರ್ 29 ರಿಂದ ನವೆಂಬರ್ 28ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ 2024ರ ಡಿಸೆಂಬರ್ 24 ರಂದು ಕಾಲೋಚಿತಗೊಳಿಸಲಾಗುವುದು. ನಂತರ ಅಂತಿಮ ಮತದಾರರ ಪಟ್ಟಿಯನ್ನು 2025ರ ಜನವರಿ 6 ರಂದು ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.