ಗುರುಮಠಕಲ್ ಠಾಣೆ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಸುರೇಶ ಎನ್ ನೇತೃತ್ವ | ಹಲವು ಸಮಸ್ಯೆಗಳು ಬಿಚ್ಚಿಟ್ಟ ಮುಖಂಡರು | ಗಾಂಜಾ ಜಾಲ ಪತ್ತೆಗೆ ಗುಪ್ತವಾಗಿ ಸಿಬ್ಬಂದಿಗಳನ್ನು ಬಿಡಲು ಮನವಿ
ಗುರುಮಠಕಲ್: ಪರಿಶಿಷ್ಟರ ಮೇಲಿನ ದೌರ್ಜನ್ಯಗಳ ಮೇಲೆ ಕಠಿಣ ಕ್ರಮವಾಗಬೇಕು. ನಾವೆಲ್ಲ ಒಗ್ಗಟ್ಟಿನಿಂದ ನ್ಯಾಯಕ್ಕಾಗಿ ಕಾನೂನು ಮೂಲಕ ಹೋರಾಡುವ ಅಗತ್ಯವಿದೆ ಎಂದು ಮುಖಂಡ ವೀರಪ್ಪ ಪ್ಯಾಟಿ ಹೇಳಿದರು.
ಪಟ್ಟಣದ ಪೊಲೀಸ ಠಾಣೆ ಆವರಣದಲ್ಲಿ ಶನಿವಾರ ಸಂಜೆ ಪ.ಜಾ.ಪ.ಪಂ. ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಪೊಲೀಸರು ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಲು ಯಾರಿಗೂ ತಿಳಿಯದಂತೆ ಗುಪ್ತವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು, ವ್ಯಸನದ ಬಗ್ಗೆ ಗುಪ್ತವಾಗಿ ಮಾಹಿತಿ ಕಲೆ ಹಾಕಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ನಾವು ಈ ಜಾತಿಯವರು ಎಂದು ಅಮಾಯಕರನ್ನು ಹೆದರಿಸುವವರೂ ಇದ್ದಾರೆ. ಅಂತಹವರ ಮೇಲೆಯೂ ನಿಗಾ ಇಡಬೇಕು ಎಂದು ಸಲಹೆ ನೀಡಿದರು.
ಕೆ.ದೇವದಾಸ ಮಾತನಾಡಿ, ಕಾನೂನು ಕುರಿತು ಇತರರಿಗೆ ಜಾಗೃತಿಯೂ ಅಗತ್ಯವಾಗಿದೆ. ದೇವಸ್ಥಾನಗಳಿಗೆ ಪ್ರವೇಶ ತಡೆ ಕಾನೂನು ಉಲ್ಲಂಘಿನೆಯಾಗುವ ಅರಿವು ಇತರೆ ವರ್ಗಗಳಿಗೆ ಮಾಹಿತಿ ಒದಗಿಸಬೇಕೆಂದು ಮನವಿ ಮಾಡಿದರು. ಎಲ್ಲಾ ಹಿಂದುಳಿದ ಜನರಿಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ಅರಿವು ಅಗತ್ಯ ಎಂದರು.
ಯುವ ಮುಖಂಡ ಅಶೋಕ ಶನಿವಾರಂ ಮಾತನಾಡಿ, ಪಟ್ಟಣದಲ್ಲಿ 5 ಪ.ಜಾ.ಪಂ. ವಾರ್ಡುಗಳಲ್ಲಿ ರಾತ್ರಿ ವೇಳೆ ಪುಡಾರಿಗಳು ದಾಂಧಲೆ ಸೃಷ್ಟಿ ಮಾಡುತ್ತಿದ್ದಾರೆ ಅದನ್ನು ನಿಯಂತ್ರಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಭಾನು ಪ್ರಕಾಶ್ ಮೇಧಾ ಮಾತನಾಡಿ, ಇಂದಿರಾ ನಗರ ಬುಡ್ಗಜಂಗಮರ ಕಾಲೋನಿ ಜನ ಭಯದಲ್ಲೇ ವಾಸ ಮಾಡುತ್ತಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಸಿ ಎಂದು ಮನವಿ ಮಾಡಿದರು. ಎಲ್ಲಾ ಠಾಣೆಯಲ್ಲಿ ಝೀರೋ ಎಫ್ ಐ ಆರ್ ಆಗಬೇಕು. ನೊಂದವರು ಠಾಣೆಗೆ ಬಂದರೆ ದೂರು ದಾಖಲಿಸಿಕೊಳ್ಳಬೇಕು. ಆ ಠಾಣೆ, ಈಠಾಣೆ ಎಂದು ಜನರು ಅಲೆದಾಡುವಂತಾಗಬಾರದು ಸಭೆಯ ಗಮನಕ್ಕೆ ತಂದರು.
ಲಾಲಪ್ಪ ತಲಾರಿ ಮಾತನಾಡಿ, ಅಟ್ರಾಸಿಟಿ ಪ್ರಕರಣ ದಾಖಲಿಸುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕು. ಪ್ರತಿದೂರು ದಾಖಲು ಮಾಡುವ ವೇಳೆ ಸತ್ಯಾಸತ್ಯತೆ ಪರಿಗಣಿಸಬೇಕು ಎಂದರು. ಅಲ್ಲದೇ ಶಿವಪುರ, ಚಂಡರಕಿ, ಚಿಂತನಹಳ್ಳಿ ಪರಿಶಿಷ್ಟರಿಗೆ ಕ್ಷೌರ ಮಾಡದಿರುವುದು, ತೀರಿ ಹೋದಾಗ ಅಂಗಡಿ ಮುಚ್ಚುವುದು ಇತರೆ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು.
ಡಿವೈಎಸ್ಪಿ ಸುರೇಶ ಎನ್ ಸಭೆಯ ಅಧ್ಯಕ್ಷತೆ ವಹಿಸಿ ಸಮಸ್ಯೆಗಳನ್ನು ಆಲಿಸಿದರು. ಪಿಐ ವೀರಣ್ಣ ಎಸ್ ದೊಡ್ಡಮನಿ, ಪಿಎಸ್ಐ ದಿನೇಶ ವೇದಿಕೆಯಲ್ಲಿದ್ದರು. ಈ ವೇಳೆ ಭೀಮಶಪ್ಪ ಗೂಡ್ಸೆ,ಆಶನ್ನ ಬುದ್ಧ, ಆನಂದ ಕುಮಾರ, ಕಾಶಪ್ಪ ದೊರೆ, ಮಾರಪ್ಪ ನಾಯಕ ಕಾಳಬೆಳಗುಂದಿ, ಶರಣಪ್ಪ ಶಿವಪುರ, ಖತಲಪ್ಪ ನಾಯಕ, ರಂಗಸ್ವಾಮಿ ಕೊಂಕಲ್, ಸುರೇಶ ರಾಠೋಡ, ಶ್ರೀಕಾಂತ ತಲಾರಿ, ಭೀಮಶಪ್ಪ ಇತರರು ಇದ್ದರು.
