ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ | ಪಟ್ಟಣದಲ್ಲಿ ಪೊಲೀಸ ಇಲಾಖೆಯಿಂದ ಕಾರ್ಯಕ್ರಮ

ಗುರುಮಠಕಲ್: ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು ಮದ್ಯಪಾನ ಸೇರಿದಂತೆ ಯಾವುದೇ ದುಶ್ಚಟಗಳಿಗೆ ಎಂದಿಗೂ ಬಲಿಯಾಗಬೇಡಿ. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಇಂತಹ ವ್ಯಸನಗಳಿಗೆ ಒಳಗಾಗಿದ್ದರೆ ಅವರಿಗೆ ‘ಬೇಡ ಬ್ರೋ’ ಎಂದು ತಿಳಿ ಹೇಳಿ ಎಂದು ಯಾದಗಿರಿ ಡಿವೈಎಸ್ಪಿ ಸುರೇಶ ಎಂ. ಹೇಳಿದರು.

ಗುರುಮಠಕಲ್ ನಲ್ಲಿ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ  ಸಸಿಗೆ  ನೀರೆರೆಯುವ ಮೂಲಕ,  ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.ವಿದ್ಯಾರ್ಥಿ ಜೀವನ ಬಂಗಾರದಂತೆ, ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕಾದರೆ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ನಿಮ್ಮ ಪೋಷಕರು ಮತ್ತು ಕುಟುಂಬದವರ ನಂಬಿಕೆ ಉಳಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಯಾವುದೇ ವ್ಯಸನದ ಕುರಿತು ಪೊಲೀಸರಿಗೆ ಮಾಹಿತಿ ನೀಡಲು ತಿಳಿಸಿದರು.

ನಾಗಭೂಷಣ ಶೆಟ್ಟಿ ವಿಶೇಷ ಉಪನ್ಯಾಸ ನೀಡಿ, ಮಾದಕ ವಸ್ತುಗಳ ಸೇವನವು ಆರಂಭದಲ್ಲಿ ಕೇವಲ ಕುತೂಹಲ ಇಲ್ಲವೇ  ಸ್ನೇಹಿತರ ಒತ್ತಡದಿಂದ ಆರಂಭವಾದರೂ ನಂತರ ಅದು ಗಂಭೀರ ವ್ಯಸನವಾಗಿ ಪರಿಣಮಿಸುತ್ತದೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಡುವುದರ ಜೊತೆಗೆ ನೆನಪಿನ ಶಕ್ತಿ ಕುಂಠಿತವಾಗುವುದು ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂದರು.

ಗ್ರೇಡ್ 2 ತಹಸೀಲ್ದಾರ್ ನರಸಿಂಹ ಸ್ವಾಮಿ, ವೈದ್ಯಾಧಿಕಾರಿ ಡಾ.ನೀಲಾಂಬಿಕ, ಹಣಮಂತ ರಾವ್ ಗೊಂಗಲೆ, ಸಿಪಿಐ ದೌಲತ್ ಎನ್ ಕುರಿ, ಶಿಕ್ಷಣ ಸಂಯೋಜಕ ರವೀಂದ್ರ ಇದ್ದರು. ಉಪನ್ಯಾಸಕಿ ಜ್ಯೋತಿಲತಾ ತಡಬಿಡಿಮಠ ನಿರೂಪಿಸಿದರು. ವಿವಿಧ ಶಾಲೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!