ಗುರುಮಠಕಲ್ ತಾಲೂಕಿನ ಜನರ ಬಹು ದಿನಗಳ ನಿರೀಕ್ಷೆ ಈಡೇರಿಕೆ | ಹೈಕೋರ್ಟ್ ಗ್ರೀನ್ ಸಿಗ್ನಲ್ | ಈ ಭಾಗದ ಜನರಿಗೆ ಅನುಕೂಲ
ಯಾದಗಿರಿ: ಗುರುಮಠಕಲ್ ನೂತನ ತಾಲೂಕು ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ವೇಗ ಸಿಕ್ಕಿದೆ. ತಾಲೂಕು ಕೇಂದ್ರ ಘೋಷಣೆಯಾಗಿ ವರ್ಷಗಳ ಬಳಿಕ ಒಂದೊಂದಾಗಿ ಕಚೇರಿಗಳು ಬರಲಾರಂಭಿಸಿವೆ.
ಇದೀಗ ನ್ಯಾಯಾಲಯ ಆರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, ವಾರಕ್ಕೆ ಮೂರು ದಿನ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಗುರುಮಠಕಲ್ ನಲ್ಲಿ ನ್ಯಾಯಾಲಯದ ವ್ಯಾಜ್ಯಗಳ ಇತ್ಯರ್ಥಕ್ಕೆ ಕರ್ನಾಟಕ ಹೈಕೋರ್ಟ್ 2026ರ ಅ.29 ರಂದು ಗ್ರೀನ್ ಸಿಗ್ನಲ್ ನೀಡಿದೆ.
ಈ ಹಿಂದೆ 2025ರ ಜೂನ್ ತಿಂಗಳಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಟೌನ್ ಹಾಲ್ ಕಟ್ಟಡವನ್ನು ಪರಿಶೀಲನೆ ನಡೆಸಿದ್ದು ಸ್ಮರಣೀಯ. ಇದೇ ಆವರಣದಲ್ಲಿ ತಹಸೀಲ್ದಾರ್ ಕಚೇರಿಯೂ ಕಾರ್ಯನಿರ್ವಹಿಸುತ್ತಿದ್ದು, ಇದು ಸೂಕ್ತ ಸ್ಥಳ ಎನ್ನುವ ಅಭಿಪ್ರಾಯವಿತ್ತು. ಇದೀಗ ಅಧಿಕೃತ ಸುತ್ತೊಲೆ ಹೊರಬಿದ್ದಿದ್ದು, ತಾಲೂಕು ನ್ಯಾಯಾಲಯ ಸ್ಥಾಪನೆಗೆ ಅಗತ್ಯ ತಯಾರಿಗೆ ವೇಗ ದೊರೆಯುವ ಸಾಧ್ಯತೆಗಳಿವೆ.
ಜನರಿಗೆ ಅನುಕೂಲ: ಯಾವುದೇ ಕೋರ್ಟ್ ವ್ಯಾಜ್ಯ ಇರಲಿ ಗುರುಮಠಕಲ್ ತಾಲೂಕಿನ ಜನರು ದೂರದ ಯಾದಗಿರಿಗೆ ಪ್ರಯಾಣಿಸುವುದು ಫಜೀತಿಯಾಗಿತ್ತು. ಕೋರ್ಟ್ ಕಲಾಪ ವಾರಕ್ಕೆ 3 ದಿನ ನಡೆಯುವುದರಿಂದ ಇಲ್ಲಿನ ಬಡ ಜನರು ಅಲೆದಾಡುವುದು ತಪ್ಪಲಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಮಿನಿ ವಿಧಾನಸೌಧ ಕಾಮಗಾರಿ: ಒಂದೇ ಸೂರಿನಡಿ ವಿವಿಧ ಇಲಾಖೆಗಳ ಕಚೇರಿಗಳು ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸುವ ಸರ್ಕಾರದ ಪ್ರಮುಖ ಮಿನಿ ವಿಧಾನಸೌಧ ಕಾಮಗಾರಿ ಗುರುಮಠಕಲ್ ನಲ್ಲಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಅಂದಾಜಿನ ಪ್ರಕಾರ 3 -6 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದಾದರೇ ಜನರು ಯಾದಗಿರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ.
ಅಗ್ನಿ ಶಾಮಕ ಠಾಣೆ ನಿರ್ಮಾಣ ಆರಂಭ: ತುರ್ತು ಸಂದರ್ಭದಲ್ಲಿ ಆಸ್ತಿಪಾಸ್ತಿ, ಪ್ರಾಣ ರಕ್ಷಣೆ ಮಾಡಬೇಕಿರುವ ಅಗ್ನಿ ಶಾಮಕ ಠಾಣೆ ಈಗಾಗಲೇ ನಿರ್ಮಾಣ ಹಂತದಲ್ಲಿರುವುದು ಖುಷಿಯ ವಿಚಾರ. 100 ಬೆಡ್ ಆಸ್ಪತ್ರೆ ಕಟ್ಟಡ ಪ್ರಗತಿ : ಇನ್ನು ಪ್ರಮುಖವಾಗಿ ಬೇಕಿರುವ ಆರೋಗ್ಯ ಸೇವೆ ದೊರೆಯುವ ಸಾರ್ವಜನಿಕ ಆಸ್ಪತ್ರೆ 100 ಬೆಡ್ ಸಾಮರ್ಥ್ಯದ ಕಟ್ಟಡ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ವಿವಿಧ ಇಲಾಖೆ ಕಚೇರಿಗಳು ಬರಲಿ : ಈಗಾಗಲೇ ತಹಸೀಲ್ದಾರ್ ಕಚೇರಿ, ತಾ.ಪಂ. ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾತ್ರ ಗುರುಮಠಕಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರವೇ ಉಳಿದ ಎಲ್ಲಾ ಇಲಾಖೆಗಳ ಕಚೇರಿಗಳು ಸ್ಥಾಪನೆಗೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂಬುದು ಜನರ ಒತ್ತಾಯ.
