ಯಾದಗಿರಿ: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪುನರ್‍ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS) ಅನುಷ್ಠಾನಗೊಳಿಸಲಾಗುತ್ತಿದ್ದು, ಅರ್ಹ ರೈತರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಯಾದಗಿರಿ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪಪಾಯ (ಪರಂಗಿ), ಹಸಿ ಮೆಣಸಿನಕಾಯಿ ಹಾಗೂ ದ್ರಾಕ್ಷಿ ಬೆಳೆಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಸಾಲ ಪಡೆದ ಮತ್ತು ಸಾಲ ಪಡೆಯದ ಎರಡೂ ವರ್ಗದ ರೈತರು ಆಧಾರ್ ಕಾರ್ಡ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‍ಬುಕ್ ಪ್ರತಿಯೊಂದಿಗೆ ತಮ್ಮ ಹತ್ತಿರದ ಬ್ಯಾಂಕುಗಳು, ಗ್ರಾಮ ಒನ್ ಕೇಂದ್ರ ಅಥವಾ ಸಿ.ಎಸ್.ಸಿ ಕೇಂದ್ರಗಳ ಮೂಲಕ ವಿಮೆ ನೋಂದಾಯಿಸಿಕೊಳ್ಳಬಹುದು.
ಬೆಳೆವಾರು ವಿಮೆ ಕಂತಿನ ವಿವರ (ಪ್ರತಿ ಹೆಕ್ಟೇರ್‍ಗೆ 5% ರಂತೆ): ಹಸಿ ಮೆಣಸಿನಕಾಯಿ 3,550 ರೂ., ದಾಳಿಂಬೆ 6,350 ರೂ., ಪರಂಗಿ/ಪಪಾಯ 6,700 ರೂ., ದ್ರಾಕ್ಷಿ 14,000 ರೂ. ಗಳಾಗಿರುತ್ತದೆ. ಈ ಬೆಳೆಗಳಿಗೆ ವಿಮೆ ನೋಂದಾಯಿಸಿಕೊಳ್ಳಲು ಜುಲೈ 31, 2026 ಕೊನೆಯ ದಿನವಾಗಿದೆ. ವಿಮೆ ಮಾಡಿಸುವ ರೈತರು ಕಡ್ಡಾಯವಾಗಿ FID (Farmer ID) ಹೊಂದಿರಬೇಕು ಹಾಗೂ ಬ್ಯಾಂಕ್ ಖಾತೆಗೆ NPCI Seeding (ಆಧಾರ್ ಲಿಂಕ್) ಮಾಡಿಸಿರಬೇಕು. ರೈತ ಬಾಂಧವರು ನಿಗದಿತ ಅವಧಿಯೊಳಗೆ ತಮ್ಮ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಾಮನಗೌಡ ಪಾಟೀಲ್ (ಎಐಡಿ ಪ್ರತಿನಿಧಿ)- 8310939753, ಸಂಗನಗೌಡ ಪಾಟೀಲ್ (ಎಐಸಿ ಪ್ರತಿನಿಧಿ)-7353284343, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.ಯಾದಗಿರಿ)-9901919133, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.ಶಹಾಪುರ)- 9902622012, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.ಸುರಪುರ)-8105190746 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಬಹುದು.
