ಜಿಲ್ಲೆಯಾದ್ಯಂತ ಯೋಗ ದಿನ ಆಚರಣೆ | ಮಕ್ಕಳು, ಮಹಿಳೆಯರು ಉತ್ಸಾಹದಿಂದ ಭಾಗಿ |ಗುರುಮಠಕಲ್ ನಲ್ಲಿ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಭಾಗಿ

ಯಾದಗಿರಿ: ಪ್ರತಿಯೊಬ್ಬರೂ ದಿನನಿತ್ಯ ಸ್ವಲ್ಪ ಸಮಯವನ್ನು ಮಿಸಲಿಟ್ಟು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡಿದರೇ ದೇಹಕ್ಕೆ ಚೈತನ್ಯ, ಮನಸ್ಸಿಗೆ ನೆಮ್ಮದಿ ಹಾಗೂ ಬದುಕಿಗೆ ಹೊಸ ಉತ್ಸಾಹ ದೊರೆಯುತ್ತದೆ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಹೇಳಿದರು.

12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ಯ ಇಲಾಖೆ ಸಂಯುಕ್ತವಾಗಿ ಇಲ್ಲಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ.12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ಆಧುನಿಕ- ತಂತ್ರಜ್ಞಾನ ಯುಗದಲ್ಲಿ ಜನರು ಮೊಬೈಲ್ ಫೋನ್, ಕಂಪ್ಯೂಟರ್ ಹಾಗೂ ಯಾಂತ್ರಿಕ ಜೀವನಕ್ಕೆ ಹೆಚ್ಚು ಒಗ್ಗಿಕೊಂಡಿರುವುದರಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಇದರ ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳು ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಯೋಗಾಭ್ಯಾಸ ದೊಡ್ಡ ಔಷಧಿಯಂತೆ ಕೆಲಸ ಮಾಡುತ್ತದೆ ಎಂದರು.

ಹಳ್ಳಿ- ಹಳ್ಳಿಗಳಲ್ಲಿ ಯೋಗದ ಪ್ರಚಾರವಾಗಬೇಕು. ಅಬಾಲವೃದ್ಧರಾದಿಯಾಗಿ ಎಲ್ಲರೂ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರೇ ಸುಸ್ಥಿರ ಸಮಾಜ, ಆರೋಗ್ಯವಂತ ಕುಟುಂಬಗಳು ತನ್ನಿಂದ ತಾನೇ ನಿರ್ಮಾಣವಾಗುತ್ತವೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಯುಷ್ಯ ವೈದ್ಯಾಧಿಕಾರಿ ಡಾ.ಪ್ರಕಾಶ ರಾಜಾಪುರ, ಯೋಗಾಭ್ಯಾಸವು ಮಾನವನ ಜೀವನದ ಒಂದು ಅಮೂಲ್ಯ ಸಾಧನವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಲಿಂಗ ಬೇಧವಿಲ್ಲದೇ ಅಭ್ಯಾಸ ಮಾಡಬಹುದೆಂದರು. ಯೋಗ ಮಕ್ಕಳಲ್ಲಿ ದೈಹಿಕ ಬೆಳವಣಿಗೆ, ಏಕಾಗ್ರತೆ ಮತ್ತು ಅತ್ಮ ವಿಶ್ವಾಸವನ್ನು ವೃದ್ಧಿಸಿದರೇ, ಯುವಕರಲ್ಲಿ ಒತ್ತಡ ನಿರ್ವಹಣೆ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಮತೋಲನವನ್ನು ಹೆಚ್ಚಿಸುತ್ತದೆ ಎಂದರು.ಮಹಿಳೆಯರು ಜೀವನದ ವಿವಿಧ ಹಂತಗಳಲ್ಲಿ ಯೋಗದಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಪುರುಷರಲ್ಲಿ ಕಾರ್ಯಕ್ಷಮತೆ ಮತ್ತು ಮಾನಸಿಕ ಧೈರ್ಯವನ್ನು ವೃದ್ಧಿಸುತ್ತದೆ ಎಂದ ಅವರು, ವಯೋವೃದ್ಧರಲ್ಲಿ ಸರಳ ಆಸನಗಳು ಮೂಲಕ ಚಲನಶೀಲತೆ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಹುದೆಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್ಚುವರಿ ಎಸ್ ಪಿ ಧರಣೇಶ, ಡಿವೈಎಸ್ ಪಿ ಸುರೇಶ ನಾಯಕ, ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ, ಬ್ರಹ್ಮಕುಮಾರಿ ವೀಣಾ ಅಕ್ಕ, ಡಾ.ಪಂಪಾರಡ್ಡಿ, ಡಾ.ಹಣಮಂತರೆಡ್ಡಿ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು.

ಜಿಲ್ಲಾ ಆಯುಷ್ಯಾಧಿಕಾರಿ ಡಾ.ವಂದನಾ ಗಾಳಿ ಸ್ವಾಗತಿಸಿದರು. ಸಂಗಮೇಶ ಕೆಂಭಾವಿ ನಿರೂಪಿಸಿದರು.ಡಾ.ಪ್ರಮೋದ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳು, ಯುವಕ,ಯುವತಿಯರು, ಸಾರ್ವಜನಿಕರು ಸೇರಿದಂತೆ ಇತರರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಿವಿಧ ಯೋಗಾಭ್ಯಾಸ ಮಾಡಿದರು.ಅನಿಲ ಗುರುಜಿ ಯೋಗಾಭ್ಯಾಸ ಮಾಡಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!