ಯಾದಗಿರಿ: ತಾಲೂಕಿನ ಮುಂಡರಗಿ ಗ್ರಾಮದಲ್ಲಿನ ಅಶೋಕನಗರದ ಜಮೀನೊಂದರಲ್ಲಿ ಹುಸನಪ್ಪ ಹಣಮಯ್ಯ ಅವರ ಹಸುವನ್ನು (ಹೊರಿ) ಶನಿವಾರ ಮಧ್ಯರಾತ್ರಿ ಚಿರತೆ ದಾಳಿ ಮಾಡಿ ಎಳೆದುಕೊಂಡು ಹೋಗಿ ತಿಂದು ಹಾಕಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಸಂಬಂಧಿಸಿದ ಅರಣ್ಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕಳೆದ ವಾರ ಮಸಕನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಚಿರತೆ ದಾಳಿಯ ಕುರಿತು ನೆನಪಿಸಿದರು.
ಅಂದೇ ಅಧಿಕಾರಿಗಳು ಎಚ್ಚೆತುಕೊಂಡಿದ್ದರೆ ಈ ಘಟನೆ ಮರುಕಳಿಸುತ್ತಿರಲಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಘಟನೆಗೆ ನೇರ ಕಾರಣ ಎಂದು ಉಮೇಶ್ ಮುದ್ನಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಘಟನೆಯನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ಬೋನಗಳನ್ನು ಅಳವಡಿಸಿ, ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಿ ಚಿರತೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು. ರೈತರಿಗೆ ಮತ್ತು ಸಾರ್ವಜನಿಕರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಮುದ್ನಾಳ ರೈತರಿಗೆ “ತಮ್ಮ ಜಾನುವಾರುಗಳ ಮೇಲೆ ಕಾಳಜಿ ವಹಿಸಬೇಕು. ಒಬ್ಬೊಬ್ಬರಾಗಿ ಜಮೀನುಗಳಿಗೆ ತೆರಳದೇ, ಎಚ್ಚರಿಕೆಯಿಂದ ಇರಬೇಕು,” ಎಂದು ಕಿವಿಮಾತು ಹೇಳಿದರು.
ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಚಿರತೆ ಭಯದಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಯು ತುರ್ತು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಶೀಘ್ರದಲ್ಲೇ ಚಿರತೆಗೆ ಬಲಿಯಾದ ಹಸುವಿನ ಮಾಲಿಕ ಹಸನಪ್ಪ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಆ ಚಿರತೆಯನ್ನು ಸೆರೆಹಿಡಿಯದೆ ಹೋದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
