ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ | ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ | ಸಚಿವ ಸ್ಥಾನ ನೀಡಲು ಪ್ರಶಾಂತ್ ಠಾಕೂರ್ ಹಾಗೂ ರಜಪೂತ ಸಮಾಜದ ಮುಖಂಡರು ಆಗ್ರಹ

ಹುಮನಾಬಾದ್: ಮಾಜಿ ಮುಖ್ಯಮಂತ್ರಿ ಅಜಾತಶತ್ರು ದಿವಂಗತ ಎನ್. ಧರಂ ಸಿಂಗ್ ಅವರ ಪುತ್ರ ಜೇವರ್ಗಿ ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಹುಮನಾಬಾದ್ ತಾಲೂಕು ರಜಪೂತ ಯುವ ಮುಖಂಡ ಪ್ರಶಾಂತ್ ಠಾಕೂರ್ ವರವಟ್ಟಿ (ಕೆ) ಹಾಗೂ ರಜಪೂತ ಸಮಾಜದ ಮುಖಂಡರು‌ ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿರುವ ಅವರು ಡಾ. ಅಜಯ್ ಸಿಂಗ್ ಅವರು ಜೇವರ್ಗಿ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಆಯ್ಕೆಯಾಗಿ ಜನಾನುರಾಗಿಯಾಗಿದ್ದಾರೆ. ಅವರ ತಂದೆ ಎನ್. ಧರಂ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಹಾಗೂ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕುಟುಂಬದ ರಾಜಕೀಯ ಅನುಭವ ಮತ್ತು ಹಿರಿತನವನ್ನು ಪರಿಗಣಿಸಿ ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ. ಅಜಯ್ ಸಿಂಗ್ ಅವರು ಸುಶಿಕ್ಷಿತ, ದೂರದೃಷ್ಟಿಯುಳ್ಳ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಸಮರ್ಥ ನಾಯಕರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅವರು ಕೈಗೊಂಡಿರುವ ಜನಪರ ಯೋಜನೆಗಳು ಮತ್ತು ಪಾರದರ್ಶಕ ಕಾರ್ಯವೈಖರಿಯು ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.

ಇವರಂತಹ ಯುವ ಮತ್ತು ದಕ್ಷ ನಾಯಕರಿಗೆ ಸಚಿವ ಸ್ಥಾನ ನೀಡುವುದರಿಂದ ಆಡಳಿತಕ್ಕೆ ಹೊಸ ಹುರುಪು ಬರುವುದಲ್ಲದೆ, ಜನಸಾಮಾನ್ಯರ ಸಮಸ್ಯೆಗಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ನಮ್ಮ ರಜಪೂತ ಸಮಾಜವು ದೀರ್ಘಕಾಲದಿಂದ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿದೆ. ಆದ್ದರಿಂದ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದ ಧ್ವನಿಯಾಗಿರುವ ಡಾ. ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರವು ಸಮಾಜದ ಆಶೋತ್ತರಗಳನ್ನು ಗೌರವಿಸಬೇಕು ಎಂದು ವಿನಂತಿಸಿದ್ದಾರೆ.

ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಜಪೂತ ಸಮಾಜ ಸೇರಿದಂತೆ ಎಲ್ಲಾ ಸಮುದಾಯಗಳ ಹಿತದೃಷ್ಟಿಯಿಂದ ಅಜಯ್ ಸಿಂಗ್ ಅವರ ನಾಯಕತ್ವದ ಅಗತ್ಯವಿದೆ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ತಕ್ಷಣವೇ ಗಮನಹರಿಸಿ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಬೇಕೆಂದು  ರಜಪೂತ ಸಮಾಜದ ಮುಖಂಡರು‌ ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!