ಕುರುಬ ಸಮಾಜಕ್ಕೆ ಎಸ್‌ಟಿ ಪ್ರಮಾಣಪತ್ರ ವಿತರಣೆಯಲ್ಲಿ ತಾರತಮ್ಯಕ್ಕೆ ವಿರೋಧ | ಸಮಾಜದ ಮುಖಂಡರಿಂದ ಪತ್ರಿಕಾಗೋಷ್ಠಿ

ಯಾದಗಿರಿ: ಕುರುಬ ಸಮುದಾಯಕ್ಕೆ ಎಸ್‌ಟಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಗೊಂದಲ ಹಾಗೂ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಅ. 10ರಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕೋಮರಾಮ್ ಭೀಮಗೊಂಡ ಕುರುಬ ಸಂಘಟನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ- ಕಲಬುರಗಿ ಮತ್ತು ಯಾದಗಿರಿ ಕುರುಬ ಸಮಾಜದ ಸರ್ವ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಒಂದೇ ಸಮುದಾಯದ ಪ್ರಮಾಣಪತ್ರಕ್ಕೆ ಒಂದೆಡೆ ಮಾನ್ಯತೆ, ಮತ್ತೊಂದೆಡೆ ನಿರಾಕರಣೆ ಅಥವಾ ವಿಭಿನ್ನ ಪ್ರಕ್ರಿಯೆ ಅನುಸರಿಸುವಂತಿದ್ದರೆ, ಇದರ ಹಿಂದೆ ಇರುವ ನಿಯಮವೇನು ಎಂಬುದನ್ನು ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬೀದರ ಜಿಲ್ಲೆಯಲ್ಲಿ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ‘ಗೊಂಡ ಕುರುಬ’ ಎಂಬ ಹೆಸರಿನಲ್ಲಿ ಸಿಂಧುತ್ವ ಪ್ರಮಾಣಪತ್ರ ನೀಡಲಾಗುತ್ತಿದೆ. ಮತ್ತೊಂದೆಡೆ ಕೊಡಗು ಜಿಲ್ಲೆಯಲ್ಲಿ ಕಾಡು ಕುರುಬ ಹಾಗೂ ಜೇನು ಕುರುಬ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯ ಜಾರಿಯಲ್ಲಿದೆ. ಯಾದಗಿರಿ ಜಿಲ್ಲೆಯಲ್ಲಿ ನೀಡುತ್ತಿಲ್ಲ ಎಂದರು.

ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಎಸ್‌ಟಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ವಿಭಿನ್ನ ರೀತಿಯ ಕ್ರಮ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಗಡಿ ಬದಲಾಗುತ್ತಿದ್ದಂತೆ ಸಮುದಾಯದ ಹಕ್ಕುಗಳ ಮಾನದಂಡವೂ ಬದಲಾಗುತ್ತದೆಯೇ?’ ಎಂಬ ಪ್ರಶ್ನೆ ಎತ್ತಿರುವ ಬಸವರಾಜ ಮದ್ರಿಕಿ, ಪ್ರಮಾಣಪತ್ರ ವಿತರಣೆ ಮತ್ತು ಸಿಂಧುತ್ವಕ್ಕೆ ಸಂಬಂಧಿಸಿದ ದಾಖಲೆಗಳು, ಸರ್ಕಾರದ ಆದೇಶಗಳು ಹಾಗೂ ಕಾನೂನುಬದ್ಧ ಮಾನದಂಡಗಳ ಕುರಿತು ರಾಜ್ಯ ಸರ್ಕಾರವೇ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಕರ್ನಾಟಕ ಸರ್ಕಾರ ತನ್ನ ಶಿಫಾರಸಿನೊಂದಿಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳ ನಡುವೆ ಸಮನ್ವಯ ಸಾಧಿಸಿ, ಸಮುದಾಯದ ಗೊಂದಲಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಸ್ಪಷ್ಟ ಆದೇಶ ಹೊರಬರುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಬೇಡಿಕೆ ಈಡೇರದಿದ್ದರೆ ಯಾದಗಿರಿ, ಬೀದರ ಮತ್ತು ಕಲಬುರಗಿ ಮೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಂಘಟಿಸಿ ಮುಂದಿನ ಹಂತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮುದಾಯಕ್ಕೆ ಸಂಬಂಧಿಸಿದ ದಾಖಲೆಗಳು, ಪ್ರಮಾಣಪತ್ರ ವಿತರಣೆ, ಸಿಂಧುತ್ವ ಹಾಗೂ ಮೀಸಲಾತಿ ಅರ್ಹತೆ ಕುರಿತು ಸರ್ಕಾರವು ಕಾನೂನು ಮತ್ತು ಅಧಿಕೃತ ದಾಖಲೆಗಳ ಆಧಾರದಲ್ಲಿ ಪಾರದರ್ಶಕ ಹಾಗೂ ಸ್ಪಷ್ಟ ನಿಲುವು ಪ್ರಕಟಿಸಬೇಕು. ಜಿಲ್ಲೆ–ತಾಲೂಕುಗಳ ನಡುವೆ ಕಂಡುಬರುತ್ತಿರುವ ವ್ಯತ್ಯಾಸಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅರ್ಹರಿಗೆ ಅನ್ಯಾಯವಾಗದಂತೆ ಗೊಂದಲ ನಿವಾರಿಸಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಕುರುಬರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಲ್, ಬಾಲಾಜಿ ಜಬಾಡೆ,ಗೋಪಾಲ ಎಂ.ಪಿ., ಸಿದ್ದು ಪೂಜಾರಿ, ಎಸ್. ನಿಜಲಿಂಗಪ್ಪ, ದೇವಿಂದ್ರಪ್ಪ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!