ಸಂತ ಸೇವಾಲಾಲ್ ಜಯಂತಿ ಆಚರಣೆ | ಬಂಜಾರಾ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಕರೆ

ಯಾದಗಿರಿ: ಶಿಕ್ಷಣದಿಂದಲೇ ಉನ್ನತಿ ಸಾಧ್ಯ. ಕಾರಣ ಬಂಜಾರ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ಶಾಲೆ ಅರ್ಧಕ್ಕೆ ಬಿಡಿಸಿ ಚಿಕ್ಕ ವಯಸ್ಸಿ ನಲ್ಲಿಯೇ ಮದುವೆ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಕರೆ ನೀಡಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ *ಸಂತ‌ ಸೇವಾಲಾಲ್ ಮಹಾರಾಜ್ ರ ಜಯಂತಿ* ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ,ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಮಾತನಾಡಿದರು.

ಸಂತ ಸೇವಾಲಾಲ್ ಮಹಾರಾಜ ರು ತಮ್ಮ ಜೀವಿತಾವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಸಂಚಾರ ಮಾಡುತ್ತಿದ್ದ ವೇಳೆ ದಾರಿಯಲ್ಲಿ‌ ಸಿಗುವ ತಾಂಡಾ ಗಳಿಗೆ ಭೇಟಿ ನೀಡಿ, ಇದನ್ನೇ ಜನಕ್ಕೆ ಹೇಳುತ್ತಿದ್ದರು. ಅದಕ್ಕಾಗಿ ಅವರ ಆಶಯ ನಿಜರೂಪದಲ್ಲಿ ಜಾರಿಯಾಗಬೇಕಾದರೆ ಹಿಂದುಳಿದ ಈ ಸಮಾಜದ ಮಕ್ಕಳು ಶಿಕ್ಷಣ ಪಡೆಯಬೇಕು. ಈ ಸಮಾಜದಲ್ಲಿನ ಅಕ್ಷರಸ್ಥರು ಪಾಲಕರಿಗೆ ತಿಳಿಹೇಳಬೇಕೆಂದರು.

ಬಡತನದ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಬೇಗನೆ ಮದುವೆ ಮಾಡಿಕೊಡುತ್ತಾರೆ. ಆದರೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡಿದರೆ ಅವಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.

ಬಂಜಾರ ಸಮಾಜದವರು ಕಷ್ಟ ಜೀವಿಗಳು, ಶ್ರಮಿಕರು, ಇಂದಿಗೂ ನೂರಾರು ತಾಂಡಾಗಳಲ್ಲಿನ‌ ಜನರು ವ್ಯವಸಾಯ ಸೇರಿದಂತೆಯೇ ವಿವಿಧ ಕೆಲಸಗಳಲ್ಲಿ‌ ತೊಡಗಿಸಿಕೊಳ್ಳುವ ಮೂಲಕ ಕಾಯಕದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲೆಯ ಗುರುಮಠಕಲ್ ಭಾಗದಲ್ಲಿ ಬಂಜಾರ ಸಮುದಾಯದಲ್ಲಿ ಚಿಕ್ಕ ವಯಸ್ಸಿಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಡಲಾಗುತ್ತಿದೆ. ಇದು ನಿಲ್ಲಿಸುವತ್ತ ಸರ್ಕಾರ ಮತ್ತು ಸಮಾಜ ಗಂಭೀರ ಚಿಂತನೆ ಮಾಡಬೇಕೆಂದರು. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಬೇಕೆಂದರು. ಬಾಲ್ಯ ವಿವಾಹ ತಡೆಯಬೇಕೆಂದರು.

ವಿಶೇಷ ಉಪನ್ಯಾಸ ನೀಡಿದ ಬಂಗಾರು ಜೆ.ಟಿ.ರಾಠೋಡ್, ಸಂತ ಸೇವಾಲಾಲ್ ರ ಜೀವನ ಆರ್ದಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಡಿವೈಎಸ್ಪಿ ಅರುಣಕುಮಾರ್, ಸಂತ ಸೇವಾಲಾಲ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ರಾಠೋಡ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಇದ್ದರು. ಕಾರ್ಯಕ್ರಮದಲ್ಲಿ ಸಮಾಜದ ಅಪಾರ ಜನರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಜಯಂತಿ ಅಂಗವಾಗಿ ಸಮಾಜದ ಸಾವಿರಾರು ಜನರು ನಗರದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

Spread the love

Leave a Reply

Your email address will not be published. Required fields are marked *

error: Content is protected !!