ನೇಗಿಲಯೋಗಿ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಆಹ್ವಾನ
ಬೀದರ: ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ವೆಚ್ಚದ ಹೊರೆಯನ್ನು ಕಡಿಮೆ ಮಾಡಿ, ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ’ ಜಾರಿಗೆ ತಂದಿದೆ. ಬೀದರ ಜಿಲ್ಲೆಯಲ್ಲಿ ಬೀದರ ಮತ್ತು ಭಾಲ್ಕಿ ತಾಲೂಕುಗಳನ್ನು ಯೋಜನೆಯ ಅನುಷ್ಠಾನಕ್ಕೆ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್ ತಿಳಿಸಿದ್ದಾರೆ.
ಕಡಿಮೆ ಪ್ರಮಾಣದ ಜಮೀನು ಹೊಂದಿರುವ ರೈತರಿಗೆ ಸ್ವಂತ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದೆ, ಖಾಸಗಿ ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆಯಬೇಕಾಗುತ್ತದೆ. ಇದರಿಂದ ಕೃಷಿ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ 20 ಗುಂಟೆಯಿಂದ ಗರಿಷ್ಠ ಮೂರು ಎಕರೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಳುಮೆ ಸೇರಿದಂತೆ ಅಗತ್ಯ ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣ ಸೇವೆ ಒದಗಿಸಲಾಗುತ್ತದೆ.
ಯೋಜನೆಯಡಿ ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು, ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. 20 ಗುಂಟೆಯಿಂದ ಒಂದು ಎಕರೆವರೆಗೆ ಒಂದು, ಎರಡು ಹಾಗೂ ಮೂರು ಚಟುವಟಿಕೆಗಳಿಗೆ ಕ್ರಮವಾಗಿ 500 ರೂ., 1ಸಾವಿರ ರೂ. ಹಾಗೂ 1,500 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
ಎರಡು ಎಕರೆವರೆಗೆ 1,000 ರೂ., 2,000 ರೂ. ಹಾಗೂ 3,000 ರೂ. ಮತ್ತು 3 ಎಕರೆವರೆಗೆ 1,500 ರೂ., 3,000 ರೂ. ಹಾಗೂ ಗರಿಷ್ಠ 4,500 ರೂ. ಪ್ರೋತ್ಸಾಹಧನ ದೊರೆಯಲಿದೆ. ಹಾಗಾಗಿ ಎಲ್ಲ ರೈತರು ಮತ್ತು ಟ್ರ್ಯಾಕ್ಟರ್ ಮಾಲೀಕರು ನೇಗಿಲಯೋಗಿ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.



