ವಿಜೃಂಭಣೆಯಿಂದ ಜರುಗಿದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವ
ಗುರುಮಠಕಲ್: ಶ್ರೀ ವೀರಭದ್ರೇಶ್ವರ ದೇವಸ್ಥಾನದ ವತಿಯಿಂದ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಅದ್ದೂರಿಯಾಗಿ ನಡೆಯಿತು.
ಜಯಂತೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಆರಂಭಗೊಂಡ ಅಖಂಡ ಭಜನೆ ಮಂಗಳವಾರ ಬೆಳಗ್ಗೆಯವರೆಗೂ ನಿರಂತರವಾಗಿ ನಡೆಯಿತು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಹಾಗೂ ಮಹಾರುದ್ರಾಭಿಷೇಕ ನೆರವೇರಿಸಲಾಯಿತು.
ಜಯಂತೋತ್ಸವದ ಪ್ರಮುಖ ಆಕರ್ಷಣೆಯಾಗಿ ನಡೆದ ಪಲ್ಲಕ್ಕಿ ಸೇವೆಯೊಂದಿಗೆ ಪುರವಂತರ ವೀರಗಾಸೆ ಭಕ್ತರ ಗಮನ ಸೆಳೆಯಿತು. ಪುರವಂತರು ವೀರಗಾಸೆ ಪ್ರದರ್ಶಿಸುತ್ತಾ ಸಾಗಿದ ದೃಶ್ಯಗಳು ಭಕ್ತರಲ್ಲಿ ಭಕ್ತಿ ಮತ್ತು ಉತ್ಸಾಹ ಮೂಡಿಸಿದವು. ವಿಶೇಷವಾಗಿ ಜಮಖಂಡಿಯಿಂದ ಆಗಮಿಸಿದ್ದ ಪುರವಂತರ ತಂಡದ ವೀರಗಾಸೆ ಪ್ರದರ್ಶನಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.
ದೇವಸ್ಥಾನದ ಸುತ್ತಮುತ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದು ಕಣ್ತುಂಬಿಕೊಂಡರು.
ಗುರುಮಠಕಲ್ ಖಾಸಮಠದ ಶ್ರೀಗಳು ಜಯಂತೋತ್ಸವದಲ್ಲಿ ಪಾಲ್ಗೊಂಡು ಭಕ್ತರನ್ನು ಆಶೀರ್ವದಿಸಿದರು. ಭಕ್ತರಿಂದ ಅಗ್ನಿ ಪ್ರವೇಶದ ನಂತರ ಮಹಾಪ್ರಸಾದ ವಿತರಣೆ ನಡೆಯುವುದರೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವು ಸಂಪನ್ನಗೊಂಡಿತು.
ಜಯಂತೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು, ಪುರವಂತರು, ವಿವಿಧ ಸೇವಾ ತಂಡಗಳು ಹಾಗೂ ಪ್ರತ್ಯಕ್ಷ–ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ದೇವಸ್ಥಾನದ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಪದಾಧಿಕಾರಿಗಳು, ಗಣ್ಯರು, ಭಕ್ತರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಉಪಸ್ಥಿತರಿದ್ದರು.
